ಟ್ವೆಂಟಿ–20 ವಿಶ್ವಕಪ್: ವಿರಾಟ್ ನಾಯಕತ್ವದ ತಂಡ ಪ್ರಕಟ-15 ಆಟಗಾರರ ಆಯ್ಕೆ ನವದೆಹಲಿ (ಪಿಟಿಐ): ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಬುಧವಾರ ನಡೆದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಸಭೆಯಲ್ಲಿ 15 ಆಟಗಾರರನ್ನು ಆಯ್ಕೆ ಮಾಡಲಾಯಿತು. ‌34 ವರ್ಷದ ಅಶ್ವಿನ್ 2017ರ ನಂತರ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಆಡಿಲ್ಲ. ಯುವ ವಿಕೆಟ್‌ಕೀಪರ್ ಇಶಾನ್ ಕಿಶನ್, ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ಅವರಿಗೆ ಸ್ಥಾನ ಲಭಿಸಿದೆ. ಇಶಾನ್ ಮತ್ತು ವರುಣ್ ಅವರು ಕಳೆದ ಐಪಿಎಲ್‌ನಲ್ಲಿ ಮಾಡಿದ ಸಾಧನೆಯ ಆಧಾರದಲ್ಲಿ ಆಯ್ಕೆಯಾಗಿದ್ದಾರೆ. ಅಕ್ಟೋಬರ್ 17ರಿಂದ ಟಿ20 ವಿಶ್ವಕಪ್ ಟೂರ್ನಿಯು ಯುಎಇ ಮತ್ತು ಓಮನ್‌ನಲ್ಲಿ ನಡೆಯಲಿದೆ. ಭಾರತವೇ ಈ ಟೂರ್ನಿಗೆ ಆತಿಥ್ಯ ವಹಿಸಲಿದೆ. ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ರಾಹುಲ್ ಚಾಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.