ಮಹಿಳೆಯರ ಕ್ರಿಕೆಟ್‌: ಸೋತು ಸರಣಿ ಕೈ ಚೆಲ್ಲಿದ ಭಾರತ ಲಖನೌ: ಆರಂಭಿಕ ಬ್ಯಾಟರ್ ಪೂನಂ ರಾವತ್ (ಔಟಾಗದೆ 104; 123 ಎಸೆತ, 10 ಬೌಂಡರಿ) ಅವರ ಶತಕ ಮತ್ತು ಮಧ್ಯಮ ಕ್ರಮಾಂಕದ ಹರ್ಮನ್‌ಪ್ರೀತ್ ಕೌರ್ (54; 35 ಎ, 7 ಬೌಂ, 1 ಸಿ) ಅವರ ಸ್ಫೋಟಕ ಬ್ಯಾಟಿಂಗ್ ವ್ಯರ್ಥವಾಯಿತು. ಅಗ್ರ ಕ್ರಮಾಂಕದ ನಾಲ್ವರ ಅರ್ಧಶತಕಗಳ ಬಲದಿಂದ ದಕ್ಷಿಣ ಆಫ್ರಿಕಾ ಮಹಿಳೆಯರ ತಂಡ ನಾಲ್ಕನೇ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು. ಏಕಾನ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹಣಾಹಣಿಯಲ್ಲಿ ಭಾರತ ನೀಡಿದ 267 ರನ್‌ಗಳ ಗೆಲುವಿನ ಗುರಿಯನ್ನು ಪ್ರವಾಸಿ ತಂಡ 48.4 ಓವರ್‌ಗಳಲ್ಲಿ ತಲುಪಿತು. ಇದಕ್ಕಾಗಿ ತಂಡ ಕಳೆದುಕೊಂಡದ್ದು ಮೂರು ವಿಕೆಟ್ ಮಾತ್ರ. ಈ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 3–1ರ ಮುನ್ನಡೆ ಸಾಧಿಸಿತು. ಸರಣಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಮಾಡಿದ ಆರಂಭಿಕ ಜೋಡಿ ಲಿಜೆಲಿ ಲೀ (69; 75 ಎ, 10 ಬೌಂ) ಮತ್ತು ನಾಯಕಿ ಲೌರಾ ವೊಲ್ವರ್ಟ್‌ (53; 78 ಎ, 6 ಬೌಂ) ಈ ಪಂದ್ಯದಲ್ಲೂ ನಿರಾಯಾಸವಾಗಿ ರನ್ ಗಳಿಸಿದರು. ಮೊದಲ ವಿಕೆಟ್‌ಗೆ ಇವರು 23 ಓವರ್‌ಗಳಲ್ಲಿ 116 ರನ್ ಸೇರಿಸಿದರು. ಇವರಿಬ್ಬರು ಔಟಾದ ನಂತರ ಲಾರಾ ಗುಡಾಲ್ (59; 66 ಎ, 5 ಬೌಂ) ಮತ್ತು ಮಿಗ್ನನ್ ಡು ಪ್ರೀಜ್ (61; 55 ಎ, 8 ಬೌಂ, 1 ಸಿ) ದಿಟ್ಟ ಆಟ ಆಡಿದರು. ಗುಡಾಲ್ ಜೊತೆ ಮರಿಜನೆ ಕಾಪ್ (22; 18 ಎ, 3 ಬೌಂ) ಔಟಾಗದೆ ಉಳಿದರು. ಪೂನಂ–ಹರ್ಮನ್ ಪ್ರೀತ್ ಭರ್ಜರಿ ಬ್ಯಾಟಿಂಗ್ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ಹಂಗಾಮಿ ನಾಯಕಿ ಲೌರಾ ವೊಲ್ವರ್ಟ್‌ ಆತಿಥೇಯರನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ತಂಡದ ಮೊತ್ತ 17 ರನ್ ಆಗುವಷ್ಟರಲ್ಲಿ ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ ಮರಳಿದರು. ಈ ಸಂದರ್ಭದಲ್ಲಿ ಪ್ರಿಯಾ ಪೂನಿಯಾ ಜೊತೆಗೂಡಿದ ಪೂನಂ ರಾವತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮಿಥಾಲಿ ರಾಜ್ (45; 71 ಎ, 4 ಬೌಂ) ಮತ್ತು ಹರ್ಮನ್‌ಪ್ರೀತ್ ಕೌರ್ ಕೂಡ ಉತ್ತಮ ಕಾಣಿಕೆ ನೀಡಿದರು. ಹಿಂದಿನ ಎರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ್ದ 31 ವರ್ಷದ ಪೂನಂ ಅವರು ಮಿಥಾಲಿ ರಾಜ್ ಜೊತೆ ಮೂರನೇ ವಿಕೆಟ್‌ಗೆ 103 ರನ್ ಸೇರಿಸಿದರು. ಎರಡು ಪಂದ್ಯಗಳಲ್ಲಿ ಗುರಿ ಬೆನ್ನತ್ತಿ ಗೆದ್ದಿದ್ದ ದಕ್ಷಿಣ ಆಫ್ರಿಕಾದ ಮುಂದೆ ಸವಾಲಿನ ಮೊತ್ತ ಕಲೆ ಹಾಕಲು ಈ ಜೊತೆಯಾಟ ನೆರವಾಯಿತು. ಮಿಥಾಲಿ ಔಟಾದ ನಂತರ ಬಂದ ಹರ್ಮನ್‌ಪ್ರೀತ್ ಕೌರ್ ಸ್ಫೋಟಕ ಶೈಲಿಯ ಬ್ಯಾಟಿಂಗ್ ಮಾಡಿ ಎದುರಾಳಿ ತಂಡದ ಬೌಲರ್‌ಗಳನ್ನು ಕಂಗೆಡಿಸಿದರು. 33 ಎಸೆತಗಳಲ್ಲಿ 50 ರನ್ ಗಳಿಸಿದ ಅವರು ನಂತರ ಶೇಖುಖುನೆ ಹಾಕಿದ ನಿಧಾನಗತಿಯ ಎಸೆತಕ್ಕೆ ಬಲಿಯಾದರು. ಇದಕ್ಕೂ ಮೊದಲು ನಾಲ್ಕನೇ ವಿಕೆಟ್‌ಗೆ ಪೂನಂ ಜೊತೆ 88 ರನ್‌ ಸೇರಿಸಿದರು. ವಿಕೆಟ್‌ಗಳು ಉರುಳುತ್ತಿದ್ದರೂ ಎದೆಗುಂದದೆ ಅಮೋಘ ಬ್ಯಾಟಿಂಗ್ ಮಾಡಿದ ಪೂನಂ ಭರ್ಜರಿ ಹೊಡೆತಗಳ ಮೂಲಕ ಮಿಂಚಿದರು. ಶಬ್ನಿಮ್ ಇಸ್ಮಾಯಿಲ್ ಎಸೆತವನ್ನು ಥರ್ಡ್‌ ಮ್ಯಾನ್ ಬೌಂಡರಿಗೆ ಅಟ್ಟುವ ಮೂಲಕ 90 ರನ್ ದಾಟಿದ ಅವರು ಇನಿಂಗ್ಸ್ ಮುಕ್ತಾಯಕ್ಕೆ ಕೆಲವೇ ಓವರ್‌ಗಳು ಬಾಕಿ ಇದ್ದಾಗ ಶತಕ ಪೂರೈಸಿದರು. ಏಳು ಸಾವಿರ ರನ್ ಪೂರೈಸಿದ ಮಿಥಾಲಿ ರಾಜ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿರುವ ಅನುಭವಿ ಆಟಗಾರ್ತಿ, ನಾಯಕಿ ಮಿಥಾಲಿ ರಾಜ್ ಏಕದಿನ ಕ್ರಿಕೆಟ್‌ನಲ್ಲಿ ಏಳು ಸಾವಿರ ರನ್ ಗಳಿಸಿದರು. ಈ ಸಾಧನೆ ಮಾಡಿದ ಮೊದಲ ಮಹಿಳೆ ಎಂಬ ಖ್ಯಾತಿ ಅವರ ಮುಡಿಯೇರಿತು. ಭಾನುವಾರ ಅವರು ಆಡಿದ್ದು ವೈಯಕ್ತಿಕ 213ನೇ ಪಂದ್ಯವಾಗಿತ್ತು. 1999ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮಿಥಾಲಿಗೆ ಈಗ 38 ವರ್ಷ ವಯಸ್ಸು. ಆರು ಸಾವಿರ ರನ್ ಪೂರೈಸಿದ ಮೊದಲ ಆಟಗಾರ್ತಿ ಎಂಬ ಖ್ಯಾತಿಯನ್ನು ಮಿಥಾಲಿ ಈ ಹಿಂದೆ ತಮ್ಮದಾಗಿಸಿಕೊಂಡಿದ್ದರು. ಹೆಚ್ಚು ರನ್‌ ಗಳಿಸಿದವರ ಪಟ್ಟಿಯ ಎರಡನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ನ ನಿವೃತ್ತ ಆಟಗಾರ್ತಿ ಚಾರ್ಲೊಟೆ ಎಡ್ವರ್ಡ್ಸ್‌ ಖಾತೆಯಲ್ಲಿ 5,992 ರನ್‌ಗಳಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.