ವೈವಾಹಿಕ ಜೀವನಕ್ಕೆ ಕಾಲಿಟ್ಟ ಬೆಸ್ಟ್‌ ಬೌಲರ್ ಬೂಮ್ರಾ, ಬೋಲ್ಡ್‌ ಆ್ಯಂಕರ್‌ ಸಂಜನಾ ಪಣಜಿ: ಭಾರತ ಕ್ರಿಕೆಟ್‌ ತಂಡದ ಬೆಸ್ಟ್‌ ಬೌಲರ್ ಜಸ್‌ಪ್ರೀತ್ ಬೂಮ್ರಾ ಮತ್ತು ಟಿವಿ ನಿರೂಪಕಿ ಸಂಜನಾ ಗಣೇಶನ್ ಅವರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ವಿವಾಹ ಸಂದರ್ಭದ ಫೋಟೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಬೂಮ್ರಾ, 'ಪ್ರೇಮವು ನಿಮ್ಮನ್ನು ಯೋಗ್ಯರೆಂದು ಕಂಡುಕೊಂಡರೆ, ಅದು ನಿಮ್ಮ ಮುಂದಿನ ಬದುಕನ್ನು ನಿರ್ದೇಶಿಸುತ್ತದೆ' ಎಂದು ತಿಳಿಸಿದ್ದಾರೆ. 'ಇಂತಹ ಪ್ರೇಮದಿಂದ ಪ್ರೇರಿತರಾದ ನಾವು ಒಟ್ಟಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ಇಂದು ನಮ್ಮ ಜೀವನದ ಅತ್ಯಂತ ಸಂತಸದಾಯಕ ದಿನಗಳಲ್ಲಿ ಒಂದಾಗಿದೆ. ನಮ್ಮ ವಿವಾಹದ ಸುದ್ದಿ ಮತ್ತು ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ' ಎಂದು ಬೂಮ್ರಾ ಟ್ವೀಟ್‌ ಮಾಡಿದ್ದಾರೆ. ಸಂಜನಾ ಗಣೇಶನ್ ಅವರು ಇದೇ ತೆರನಾದ ಸಂದೇಶವನ್ನು ತಮ್ಮ ವಿವಾಹ ಚಿತ್ರದೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ಬೂಮ್ರಾ ಅವರು ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್‌ಗೆ ಗೈರಾಗಿದ್ದರು. ಮದುವೆ ತಯಾರಿಗಾಗಿ ಜಸ್‌ಪ್ರೀತ್ ಬೂಮ್ರಾ ಅವರಿಗೆ ಬಿಸಿಸಿಐ ರಜೆ ನೀಡಿತ್ತು. 27 ರ ಹರೆಯದ ಬೂಮ್ರಾ 2016ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಈ ವರೆಗೆ 19 ಟೆಸ್ಟ್‌, 67 ಏಕದಿನ ಪಂದ್ಯ ಮತ್ತು 50 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಸಂಜನಾ ಗಣೇಶನ್ ಅವರು ಕ್ರೀಡಾ ನಿರೂಪಕಿಯಾಗಿದ್ದಾರೆ. ಐಸಿಸಿ ಕ್ರಿಕೆಟ್ ವಿಶ್ವಕಪ್-2019, ಐಪಿಎಲ್ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಿಗೆ ನಡೆದ ನೇರಪ್ರಸಾರ ಕಾರ್ಯಕ್ರಮಗಳಲ್ಲಿ ಸಂಜನಾ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.