ಸಮಾಧಾನಕರ ಗೆಲುವಿಗಾಗಿ ಭಾರತದ ಹೋರಾಟ ಲಖನೌ: ಈಗಾಗಲೇ ಏಕದಿನ ಕ್ರಿಕೆಟ್ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿರುವ ದಕ್ಷಿಣ ಆಫ್ರಿಕಾ ತಂಡವನ್ನು ಕೊನೆಯ ಪಂದ್ಯದಲ್ಲಿ ಮಿಥಾಲಿ ರಾಜ್ ನಾಯಕತ್ವದ ಭಾರತ ತಂಡವು ಬುಧವಾರ ಎದುರಿಸಲಿದೆ. ಐದು ಪಂದ್ಯಗಳ ಈ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 3–1ರಿಂದ ಮುನ್ನಡೆ ಸಾಧಿಸಿದೆ. ಇನ್ನುಳಿದಿರುವ ಒಂದು ಪಂದ್ಯದಲ್ಲಿ ಸಮಾಧಾನಕರ ಗೆಲುವು ದಕ್ಕಿಸಿಕೊಳ್ಳುವತ್ತ ಆತಿಥೇಯರು ಕಣಕ್ಕಿಳಿಯಲಿದ್ದಾರೆ. ಕೋವಿಡ್ ಕಾಲದಲ್ಲಿ ಭಾರತ ಮಹಿಳಾ ತಂಡವು ಆಡುತ್ತಿರುವ ಮೊದಲ ಸರಣಿ ಇದಾಗಿದೆ. ಅಗ್ರಕ್ರಮಾಂಕದ ಬ್ಯಾಟರ್ ಶೇಫಾಲಿ ವರ್ಮಾ ಮತ್ತು ಬೌಲರ್ ಶಿಖಾ ಪಾಂಡೆ ಅವರು ಈ ಬಾರಿ ಅಲಭ್ಯರಾಗಿದ್ದು ತಂಡದ ಹಿನ್ನಡೆಗೆ ಕಾರಣವಾಗಿದೆ. ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ್ ಸರಣಿಯ ನಾಲ್ಕು ಪಂದ್ಯಗಳಲ್ಲಿ ಐದು ವಿಕೆಟ್‌ ಗಳಿಸಿದ್ದಾರೆ. ಅನುಭವಿ ಲೆಗ್‌ಸ್ಪಿನ್ನರ್ ಪೂನಂ ಯಾದವ್ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಮಾಡಿಲ್ಲ. ಆದರೆ ಅನುಭವಿ ಮಧ್ಯಮವೇಗಿ ಜೂಲನ್ ಗೋಸ್ವಾಮಿ ಅವರು ಉತ್ತಮ ಬೌಲಿಂಗ್ ಮಾಡಿದ್ದಾರೆ. ಮೂರು ಪಂದ್ಯಗಳಿಂದ ಎಂಟು ವಿಕೆಟ್ ಗಳಿಸಿದ್ದಾರೆ. ಅಗ್ರಕ್ರಮಾಂಕದ ಬ್ಯಾಟರ್ ಪೂನಂ ರಾವತ್ ಸರಣಿಯಲ್ಲಿ ಎರಡು ಅರ್ಧಶತಕ ಮತ್ತು ಒಂದು ಶತಕ ಗಳಿಸಿದ್ದಾರೆ. ನಾಯಕಿ ಮಿಥಾಲಿ ಮತ್ತು ಹರ್ಮನ್‌ಪ್ರೀತ್ ಕೌರ್ ಅವರು ಲಯದಲ್ಲಿದ್ದಾರೆ. ಆದರೆ, ಸ್ಮೃತಿ ಮಂದಾನ ಒಂದು ಪಂದ್ಯದಲ್ಲಿ ಮಾತ್ರ ಚೆನ್ನಾಗಿ ಆಡಿದ್ದರು. ಜೆಮಿಮಾ ರಾಡ್ರಿಗಸ್ ಕೂಡ ಲಯದಲ್ಲಿಲ್ಲ. ಆದರೆ ದಕ್ಷಿಣ ಆಫ್ರಿಕಾ ತಂಡದ ಬ್ಯಟ್ಸ್‌ವುಮನ್ ಲಿಝೆಲ್ ಲೀ ಅವರು ಒಟ್ಟು 288 ರನ್‌ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಮೂರನೇ ಪಂದ್ಯದಲ್ಲಿ ತಂಡದ ಗೆಲುವಿನ ರೂವಾರಿಯಾಗಿದ್ದರು. ತಂಡದ ಬೌಲರ್ ಶಬ್ನಿಮ್ ಇಸ್ಮಾಯಿಲ್ ನಾಲ್ಕು ಪಂದ್ಯಗಳಿಂದ ಏಳು ವಿಕೆಟ್ ಗಳಿಸಿದ್ದಾರೆ. ಇವರ ಸವಾಲನ್ನು ಭಾರತವು ಮೀರಿ ನಿಂತರೆ ಜಯ ಸಾಧ್ಯವಾಗಬಹುದು. ಪಂದ್ಯ ಆರಂಭ: ಬೆಳಿಗ್ಗೆ 9 ಸ್ಥಳ: ಅಟಲ್‌ ಬಿಹಾರಿ ವಾಜಪೇಯಿ ಕ್ರೀಡಾಂಗಣ, ಲಖನೌ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.