ರಾಮೇಶ್ವರಿ ಪರಿಣಾಮಕಾರಿ ಬೌಲಿಂಗ್ ಚೆನ್ನೈ: ರಾಮೇಶ್ವರಿ ಗಾಯಕವಾಡ್‌ (11ಕ್ಕೆ 4) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಕರ್ನಾಟಕ ಮಹಿಳೆಯರು ಭರ್ಜರಿ ಜಯ ಗಳಿಸಿದರು. ಇಲ್ಲಿಯ ಎಸ್‌ಆರ್‌ಎಮ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಬಿಸಿಸಿಐ ಏಕದಿನ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿಭಾನುವಾರ ಮೇಘಾಲಯ ತಂಡವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿದರು. ಪಂದ್ಯದಲ್ಲಿ ಮೇಘಾಲಯ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತ ಸಾಗಿದ ತಂಡಕ್ಕೆ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎಲ್‌. ತಮಾಂಗ್‌ (18) ಹಾಗೂ ದಿಯಾಕಾ (13) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ರಾಮೇಶ್ವರಿ ಅವರಿಗೆ ಬೌಲಿಂಗ್‌ನಲ್ಲಿ ಉತ್ತಮ ಬೆಂಬಲ ನೀಡಿದ ಚಂದು ವಿ. ಎರಡು ವಿಕೆಟ್ ತಮ್ಮದಾಗಿಸಿಕೊಂಡರು. 33.4 ಓವರ್ ಆಡಿದ ಮೇಘಾಲಯ ಮಹಿಳಾ ತಂಡ ಕೇವಲ 49 ರನ್‌ಗಳಿಗೆ ಸರ್ವಪತನವಾಯಿತು. ಸುಲಭ ಗುರಿ ಬೆನ್ನತ್ತಿದ ಕರ್ನಾಟಕ ತಂಡ ಕೇವಲ ಆರು ಓವರ್‌ಗಳಲ್ಲಿ ಜಯದ ದಡ ಮುಟ್ಟಿತು. ಆರಂಭದ ಆಟಗಾರ್ತಿಯರಾದ ವನಿತಾ ವಿ.ಆರ್‌ (28) ಹಾಗೂ ಎಸ್‌. ಶುಭಾ (ಔಟಾಗದೆ 21) ಮಿಂಚಿದರು. ಸಂಕ್ಷಿಪ್ತ ಸ್ಕೋರು: ಮೇಘಾಲಯ: 33.4 ಓವರ್‌ಗಳಲ್ಲಿ 49 (ಎಲ್‌.ತಮಾಂಗ್ 18, ದಿಯಾಕಾ ಔಟಾಗದೆ 13; ರಾಮೇಶ್ವರಿ ಗಾಯಕವಾಡ್‌ 11ಕ್ಕೆ 4, ಚಂದು ವಿ. 17ಕ್ಕೆ 2, ಶುಭಾ ಎಸ್‌. 3ಕ್ಕೆ 1, ಸಹನಾ ಎಸ್‌.ಪವಾರ್‌ 7ಕ್ಕೆ1). ಕರ್ನಾಟಕ: 6 ಓವರ್‌ಗಳಲ್ಲಿ 1 ವಿಕೆಟ್‌ಗೆ 53 (ವನಿತಾ ವಿ.ಆರ್‌. 28, ಶುಭಾ ಎಸ್‌. ಔಟಾಗದೆ 21). ಫಲಿತಾಂಶ: ಕರ್ನಾಟಕ ತಂಡಕ್ಕೆ 9 ವಿಕೆಟ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.