ಪ್ರಸಿದ್ಧ ಕೃಷ್ಣ ಟೆಸ್ಟ್ ಆಡಲಿ: ಗಾವಸ್ಕರ್ ಪುಣೆ (ಪಿಟಿಐ): ಇಂಗ್ಲೆಂಡ್ ಎದುರಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಪದಾರ್ಪಣೆ ಮಾಡಿದ ಕನ್ನಡಿಗ ಪ್ರಸಿದ್ಧ ಕೃಷ್ಣ ಅವರ ಬಗ್ಗೆ ಕ್ರಿಕೆಟ್‌ ದಿಗ್ಗಜ ಸುನಿಲ್ ಗಾವಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ’ಪ್ರತಿಭಾವಂತ ಆಟಗಾರನಾಗಿರುವ ಪ್ರಸಿದ್ಧಕೃಷ್ಣ ಅವರನ್ನು ಟೆಸ್ಟ್ ತಂಡಕ್ಕೆ ಸೇರ್ಪಡೆ ಮಾಡುವತ್ತ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಯೋಚಿಸಬೇಕು‘ ಎಂದು ಗಾವಸ್ಕರ್ ಸಲಹೆ ನೀಡಿದ್ದಾರೆ. ಇಂಗ್ಲೆಂಡ್ ಎದುರಿನ ಮೊದಲ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಪ್ರಸಿದ್ಧ ನಾಲ್ಕು ವಿಕೆಟ್ ಗಳಿಸಿದ್ದರು. ಎರಡನೇ ಪಂದ್ಯದಲ್ಲಿ 37ನೇ ಓವರ್‌ನಲ್ಲಿ ಎರಡು ವಿಕೆಟ್ ಕಬಳಿಸಿದ್ದರು. ಅದರಲ್ಲಿ ಅವರು ಪ್ರಯೋಗಿಸಿದ್ದ ನಿಖರವಾದ ಯಾರ್ಕರ್‌ಗೆ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಔಟಾಗಿದ್ದರು. ’ಜಸ್‌ಪ್ರೀತ್ ಬೂಮ್ರಾ ಸೀಮಿತ ಓವರ್‌ಗಳಲ್ಲಿ ಆಡಿದ ನಂತರ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಅದೇ ತರಹದ ಪ್ರತಿಭೆ ಇರುವ ಪ್ರಸಿದ್ಧ ಬಗ್ಗೆಯೂ ಆಯ್ಕೆಗಾರರು ಚಿಂತನೆ ನಡೆಸಬೇಕು. ಪ್ರಸಿದ್ಧ ಎಸೆತಗಳ ವೇಗ ಮತ್ತು ಸೀಮ್‌ ಪೊಸಿಷನ್ ತುಂಬಾ ಚೆನ್ನಾಗಿದೆ. ಕೆಂಪು ಚೆಂಡಿನಲ್ಲಿ ಬೌಲಿಂಗ್ ಮಾಡುವಾಗ ಈ ಕೌಶಲ ಉಪಯುಕ್ತ‘ ಎಂದು ವೀಕ್ಷಕ ವಿವರಣೆಯ ಸಂದರ್ಭದಲ್ಲಿ ಗಾವಸ್ಕರ್ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.