ಗಾಯದಿಂದ ಗುಣಮುಖರಾಗಿರುವ ಮಧ್ಯಮವೇಗಿ ಮೊಹಮ್ಮದ್ ಶಮಿ ಐಪಿಎಲ್‌ನಲ್ಲಿ ಕಣಕ್ಕೆ ನವದೆಹಲಿ: ಗಾಯದಿಂದ ಸಂಪೂರ್ಣ ಗುಣಮುಖರಾಗಿರುವ ಮಧ್ಯಮವೇಗಿ ಮೊಹಮ್ಮದ್ ಶಮಿ ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಹೋದ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಪಂದ್ಯದಲ್ಲಿ ಅವರು ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ವೇಗಿ ಪ್ಯಾಟ್ ಕಮಿನ್ಸ್‌ ಎಸೆತವು ಬಡಿದು ಅವರ ಮಣಿಕಟ್ಟಿನ ಮೂಳೆ ಮುರಿದಿದ್ದು. ಆದ್ದರಿಂದ ಅವರು ಸರಣಿಯಿಂದ ಹೊರಬಂದಿದ್ದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಮತ್ತು ಪುನಶ್ಚೇತನದಲ್ಲಿ ಪಾಲ್ಗೊಂಡ ನಂತರ ಚೇತರಿಸಿಕೊಂಡಿದ್ದಾರೆ. ಮಾರ್ಚ್ 20ರಂದು ಎನ್‌ಸಿಎನಿಂದ ತಮ್ಮ ಅಭ್ಯಾಸದ ಕಣಕ್ಕೆ ಮರಳಿದ್ದಾರೆ. ‘ನಾನೀಗ ಸಂಪೂರ್ಣ ಫಿಟ್ ಆಗಿದ್ದೇನೆ. ಅಡಿಲೇಡ್ ಟೆಸ್ಟ್‌ನಲ್ಲಿ ಗಾಯಗೊಂಡಿದ್ದು ದುರದೃಷ್ಟಕರ. ಇದೆಲ್ಲವೂ ಆಟದಲ್ಲಿ ಸಾಮಾನ್ಯ. ಉಳಿದಂತೆ ಫಿಟ್‌ನೆಸ್‌ ಸಮಸ್ಯೆಯೇನೂ ಇಲ್ಲ‘ ಎಂದರು. ‘ನಾನು ಸದಾ ಸಾಕಾರತ್ಮಕವಾಗಿ ಯೋಚಿಸುತ್ತೇನೆ. ಹೋದ ಋತುವಿನಲ್ಲಿ ನನ್ನ ಸಾಧನೆ ತೃಪ್ತಿಕರವಾಗಿತ್ತು. ಈ ಬಾರಿಯ ಐಪಿಎಲ್‌ನಲ್ಲಿಯೂ ಚೆನ್ನಾಗಿ ಆಡುತ್ತೇನೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‘ನಾನು ಎನ್‌ಸಿಎನಲ್ಲಿ ಹೆಚ್ಚು ಕಾಲ ಉಳಿದೆ. ಅಲ್ಲಿ ಉತ್ತಮ ಸೌಲಭ್ಯಗಳಿವೆ. ಜೊತೆಗೆ ಕೋವಿಡ್ ತಡೆ ಶಿಷ್ಟಾಚಾರ ಪಾಲಿಸಲೂ ಅನುಕೂಲ. ಮನೆಗೆ ಹೋಗುವ ಅವಕಾಶ ಇತ್ತು. ಆದರೆ, ಬಯೋಬಬಲ್ ನಲ್ಲಿ ಇರುವ ಅಭ್ಯಾಸ ತಪ್ಪಿದಂತಾಗುತ್ತಿತ್ತು‘ ಎಂದಿದ್ದಾರೆ. ‘ಬಯೋಬಬಲ್ ನಲ್ಲಿ ಇರುವುದು ಕಠಿಣ ಸವಾಲು. ಸ್ನೇಹಿತರು ಮತ್ತು ಸಂಬಂಧಿಕರನ್ನೂ ಭೇಟಿಯಾಗುವಂತಿಲ್ಲ. ಆದರೆ ಇಂದಿನ ದಿನಗಳಲ್ಲಿ ಇದು ಅನಿವಾರ್ಯವಾಗಿದೆ. ಇದಕ್ಕೆ ಹೊಂದಿಕೊಂಡು ನಡೆಯಬೇಕು‘ ಎಂದರು. ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುವ ಶಮಿ ಹೋದ ವರ್ಷದ ಐಪಿಎಲ್‌ನಲ್ಲಿ 20 ವಿಕೆಟ್‌ಗಳನ್ನು ಗಳಿಸಿದ್ದರು. ‘ಚುಟುಕು ಕ್ರಿಕೆಟ್‌ನಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಸ್ಪಷ್ಟತೆ ಇರಬೇಕು. ಹೋದ ಬಾರಿ ತಂಡವಾಗಿ ಚೆನ್ನಾಗಿ ಆಡಿದೆವು. ಆದರೆ, ಕೆಲವು ಪಂದ್ಯಗಳಲ್ಲಿ ಜಯದ ಅವಕಾಶವನ್ನು ಕೈಚೆಲ್ಲಿದ್ದು ದುಬಾರಿಯಾಯಿತು. ಈ ಬಗ್ಗೆ ತಂಡದ ಎಲ್ಲರೂ ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ತಪ್ಪು ತಿದ್ದಿಕೊಂಡು ಮುಂದುವರಿಯಬೇಕು‘ ಎಂದಿದ್ದಾರೆ . ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.