ಬದರಿನಾಥ್‌ಗೆ ಕೋವಿಡ್‌–19 ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಎಸ್‌.ಬದರಿನಾಥ್ ಅವರಿಗೆ ಕೋವಿಡ್‌–19 ಇರುವುದು ಖಚಿತವಾಗಿದೆ. ಈ ವಿಷಯವನ್ನು ಬುಧವಾರ ಅವರು ಹೇಳಿಕೊಂಡಿದ್ದು, ಸದ್ಯ ಮನೆಯಲ್ಲಿ ಪ್ರತ್ಯೇಕವಾಸದಲ್ಲಿದ್ದಾರೆ. ಇದರೊಂದಿಗೆ ರಸ್ತೆ ಸುರಕ್ಷತಾ ವಿಶ್ವ ಟಿ20 ಸರಣಿಯಲ್ಲಿ ಆಡಿದ ಭಾರತದ ಮೂರನೇ ಆಟಗಾರನಿಗೆ ಕೋವಿಡ್‌ ತಗಲಿದಂತಾಗಿದೆ. ರಾಯಪುರದಲ್ಲಿ ನಡೆದ ಟೂರ್ನಿಯಲ್ಲಿ ಇಂಡಿಯಾ ಲೆಜೆಂಡ್ಸ್ ಪರ ಆಡಿದ್ದ ಸಚಿನ್ ತೆಂಡೂಲ್ಕರ್ ಹಾಗೂ ಯೂಸುಫ್ ಪಠಾಣ್ ಅವರಿಗೂ ಕೋವಿಡ್‌ ಇರುವುದು ಶನಿವಾರ ದೃಢಪಟ್ಟಿತ್ತು. ‘ಕೋವಿಡ್‌ನಿಂದ ದೂರ ಇರಲು ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳು ಹಾಗೂ ಅಗತ್ಯ ಪರೀಕ್ಷೆಗಳನ್ನು ನಿರಂತರವಾಗಿ ಮಾಡಿಸಿಕೊಳ್ಳುತ್ತಿದ್ದೆ. ಆದಾಗ್ಯೂ ಸೋಂಕು ಇರುವುದು ಖಚಿತಪಟ್ಟಿದೆ. ಕೊರೊನಾದ ಸೌಮ್ಯ ಲಕ್ಷಣಗಳಿವೆ. ವೈದ್ಯರು ಸೂಚಿಸಿದ ಕ್ರಮಗಳನ್ನು ಪಾಲಿಸುತ್ತಿರುವೆ‘ ಎಂದು ಟ್ವಿಟರ್‌ನಲ್ಲಿ ಬದರಿನಾಥ್ ಬರೆದುಕೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.