ಸ್ವಸ್ತಿಕ್ ಯೂನಿಯನ್‌ ಸಿಸಿಗೆ ಪ್ರಶಸ್ತಿ ಬೆಂಗಳೂರು: ಸೃಜನ್ ನಂದನ್ (ಔಟಾಗದೆ 98) ಅವರ ಅಮೋಘ ಆಟದ ನೆರವಿನಿಂದ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ (2) ತಂಡವು ಕೆಎಸ್‌ಸಿಎ ಗುಂಪು 1, 2, 3ನೇ ಡಿವಿಷನ್‌ ಅಂತರಕ್ಲಬ್‌ 16 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ವಲ್ಚರ್ಸ್ ಕ್ರಿಕೆಟ್ ಕ್ಲಬ್ ತಂಡವನ್ನು ಪರಾಭವಗೊಳಿಸಿತು. ಇಲ್ಲಿನ ಆರ್‌ಎಸ್‌ಐ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಲ್ಚರ್ಸ್, ಕಾರ್ತಿಕೇಯ ಕೆ.ಪಿ. (ಔಟಾಗದೆ 97) ಅವರ ಆಟದ ಬಲದಿಂದ 50 ಓವರ್‌ಗಳಲ್ಲಿ 181 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಸ್ವಸ್ತಿಕ್ ಯೂನಿಯನ್ ತಂಡದ ಮಾಂಕಾಳೇಶ್‌ ಐದು ವಿಕೆಟ್ ಗಳಿಸಿದರು. ಈ ಗುರಿಯನ್ನು ಸ್ವಸ್ತಿಕ್‌ ಯೂನಿಯನ್ ತಂಡ 34ನೇ ಓವರ್‌ನಲ್ಲಿ ತಲುಪಿತು. ಸಂಕ್ಷಿಪ್ತ ಸ್ಕೋರು: ವಲ್ಚರ್ಸ್ ಕ್ರಿಕೆಟ್‌ ಕ್ಲಬ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 181 (ಕಾರ್ತಿಕೇಯ ಕೆ.ಪಿ. ಔಟಾಗದೆ 97; ಮಾಂಕಾಳೇಶ್‌ ಆರ್‌.ಜೆ. 38ಕ್ಕೆ 5, ಸಚಿನ್‌ ಎಸ್‌.ಎ. 33ಕ್ಕೆ 2). ಸ್ವಸ್ತಿಕ್ ಯೂನಿಯನ್ ಕ್ರಿಕೆಟ್‌ ಕ್ಲಬ್‌ (2): 33.3 ಓವರ್‌ಗಳಲ್ಲಿ 3 ವಿಕೆಟ್‌ಗೆ 182 (ಶಿವಂ ಎಂ.ಬಿ. 33, ಸೃಜನ್ ನಂದನ್‌ ಔಟಾಗದೆ 98, ಅನೀಶ್ ಕೆ.ಎನ್‌. 37; ಅನ್ಷ್‌ ಐಮಾ 53ಕ್ಕೆ 2). ಫಲಿತಾಂಶ: ಸ್ವಸ್ತಿಕ್ ಯೂನಿಯನ್ ಕ್ರಿಕೆಟ್‌ ಕ್ಲಬ್‌ಗೆ ಏಳು ವಿಕೆಟ್‌ಗಳ ಜಯ ಮತ್ತು ಪ್ರಶಸ್ತಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.