ಅಗ್ರಸ್ಥಾನಕ್ಕೆ ಮರಳಿದ ಶೆಫಾಲಿ ವರ್ಮಾ ದುಬೈ: ಬಿರುಸಿನ ಹೊಡೆತಗಳ ಆಟಗಾರ್ತಿ, ಭಾರತದ ಶೆಫಾಲಿ ವರ್ಮಾ ಐಸಿಸಿ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ತೋರಿದ ಉತ್ತಮ ಸಾಮರ್ಥ್ಯದಿಂದಾಗಿ ಅವರ ಸ್ಥಾನದಲ್ಲಿ ಬಡ್ತಿಯಾಗಿದೆ. 17 ವರ್ಷದ ಶೆಫಾಲಿ, ಹೋದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ನಾಕೌಟ್ ಹಂತಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಸಂದರ್ಭದಲ್ಲಿ ಅವರು ರ‍್ಯಾಂಕಿಂಗ್‌ನಲ್ಲಿ ಮೊದಲ ಬಾರಿ ಅಗ್ರಸ್ಥಾನಕ್ಕೇರಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ 23 ಹಾಗೂ 47 ರನ್‌ ಗಳಿಸಿರುವ ಶೆಫಾಲಿ, ಆಸ್ಟ್ರೇಲಿಯಾದ ಬೆಥ್ ಮೂನಿ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಲಿಜೆಲಿ ಲೀ ಅವರ ಕ್ರಮಾಂಕದಲ್ಲೂ ಏರಿಕೆಯಾಗಿದ್ದು ಸದ್ಯ ಅವರು 11ನೇ ಸ್ಥಾನದಲ್ಲಿದ್ದಾರೆ. ಅದೇ ತಂಡದ ಲೌರಾ ವೊಲ್ವರ್ಟ್‌ 24ನೇ ಸ್ಥಾನಕ್ಕೆ ಹಾಗೂ ನಾಯಕಿ ಸುನೆ ಲೂಸ್‌ 38ನೇ ಸ್ಥಾನಗಳಿಗೆ ಬಡ್ತಿ ಪಡೆದಿದ್ದಾರೆ. ಭಾರತದ ದೀಪ್ತಿ ಶರ್ಮಾ 40ನೇ ಸ್ಥಾನದಲ್ಲಿದ್ದು, ಯುವ ಆಟಗಾರ್ತಿ ರಿಚಾ ಘೊಷ್‌ 85ನೇ ಸ್ಥಾನಕ್ಕೇರಿದ್ದಾರೆ. ಬೌಲರ್‌ಗಳ ವಿಭಾಗದಲ್ಲಿ ಕರ್ನಾಟಕದ ರಾಜೇಶ್ವರಿ ಗಾಯಕವಾಡ್‌ 25ನೇ ಸ್ಥಾನದಲ್ಲಿದ್ದಾರೆ. ಮಿಥಾಲಿ ಸ್ಥಾನದಲ್ಲಿ ಬಡ್ತಿ: ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಭಾರತ ತಂಡದ ನಾಯಕಿ ಮಿಥಾಲಿ ರಾಜ್‌ ಒಂದು ಸ್ಥಾನ ಏರಿಕೆ ಕಂಡಿದ್ದು, ಎಂಟನೇ ಸ್ಥಾನದಲ್ಲಿದ್ದಾರೆ. ಪ್ರಿಯಾ ಪೂನಿಯಾ ಐದು ಸ್ಥಾನ ಬಡ್ತಿ ಪಡೆದು 53ನೇ ಸ್ಥಾನಕ್ಕೆ ತಲುಪಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.