ಸೈಯದ್ ಕಿರ್ಮಾನಿ "ಪಿಚ್ ಪರ್ಫೆಕ್ಟ್‌‘ ಬೆಂಗಳೂರು: ಮಕ್ಕಳು, ಯುವಸಮುದಾಯಕ್ಕೆ ಸ್ಪೂರ್ತಿದಾಯಕವಾದ ಯಶೋಗಾಥೆಗಳನ್ನು ಪರಿಚಯಿಸಲು ಯೂಟ್ಯೂಬ್‌ನಲ್ಲಿ ವಾಹಿನಿಯನ್ನು ಆರಂಭಿಸಿದ್ದೇನೆ ಎಂದು ಮಾಜಿ ಕ್ರಿಕೆಟಿಗ ಸೈಯದ್ ಕಿರ್ಮಾನಿ ತಿಳಿಸಿದರು. ’ಕೊರೊನಾದಿಂದಾಗಿ ಲಾಕ್‌ಡೌನ್ ಜಾರಿಯಾದಾಗ ಮನೆಯಲ್ಲಿರಲೇಬೇಕಾಯಿತು. ಎಂಟು–ಒಂಬತ್ತು ತಿಂಗಳು ಬಹಳಷ್ಟು ಜನರು ಮನೆಯಲ್ಲಿ ಉಳಿದರು. ನನ್ನ ಪರಿಚಯದ ಒಂದಿಬ್ಬರು ವಿಡಿಯೊಗ್ರಾಫರ್‌ಗಳು ಕೆಲಸ ಕಳೆದುಕೊಂಡಿದ್ದರು. ಅವರು ಮತ್ತು ನನ್ನ ಕುಟುಂಬದ ಸದಸ್ಯರು ಮಾತನಾಡುವಾಗ ಯುಟ್ಯೂಬ್‌ ವಾಹಿನಿ ಮಾಡುವ ಯೋಚನೆ ಬಂದಿತು. ಇದು ಮಕ್ಕಳು ಮತ್ತು ಯುವಸಮುದಾಯಕ್ಕೆ ಪ್ರೇರಣಾದಾಯಕವಾಗಬೇಕು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗಿರುವ ವ್ಯಕ್ತಿಗಳ ಕುರಿತ ಯಶೋಗಾಥೆಗಳನ್ನು ದಾಖಲಿಸುವ ವಾಹಿನಿಯಾಗಿದೆ. ಆ ದಿಗ್ಗಜರ ಸಂದರ್ಶನಗಳು ಸ್ಪೂರ್ತಿದಾಯಕವಾಗಿವೆ. ಕಿರ್ಮಾನಿಸ್ ಪಿಚ್‌ ಪರ್ಫೆಕ್ಸ್‌ ಎಂಬ ಶೀರ್ಷಿಕೆ ನೀಡಲಾಗಿದೆ‘ ಎಂದು ಗುರುವಾರ ಕಿರ್ಮಾನಿ ಸುದ್ದಿಗಾರರಿಗೆ ತಿಳಿಸಿದರು. ‘ನಾನು ಸಾಮಾಜಿಕ ಜಾಲತಾಣಗಳಿಂದ ಸದಾ ದೂರ. ಇವತ್ತಿಗೂ ಯಾವುದೇ ತಾಣದಲ್ಲಿಯೂ ನನ್ನ ಖಾತೆಯಿಲ್ಲ. ಆದರೆ, ಮೊದಲ ಬಾರಿಗೆ ಯುಟ್ಯೂಬ್‌ನಲ್ಲಿ ಕಾರ್ಯಾರಂಭ ಮಾಡಿದ್ದೇನೆ‘ ಎಂದರು. ತಮ್ಮ ಆತ್ಮಚರಿತ್ರೆಯನ್ನು ಬರೆಯುತ್ತಿರುವುದಾಗಿಯೂ 71 ವರ್ಷದ ಕಿರ್ಮಾನಿ ಈ ಸಂದರ್ಭದಲ್ಲಿ ತಿಳಿಸಿದರು. ಭಾರತ ತಂಡದ ವಿಕೆಟ್‌ಕೀಪರ್ ರಿಷಭ್ ಪಂತ್ ಕುರಿತು ಪ್ರತಿಕ್ರಿಯಿಸಿದ ಕಿರ್ಮಾನಿ, ‘ವಿಕೆಟ್ ಹಿಂದೆ ಮಾತನಾಡುವುದು ಅವರ ಶೈಲಿ. ಆದರೆ ಬ್ಯಾಟ್ಸ್‌ಮನ್‌ಗಳ ಏಕಾಗ್ರತೆಗೆ ಭಂಗ ತರುವಂತಹ ಚಾಟಿಂಗ್, ಸ್ಲೆಡ್ಜಿಂಗ್‌ಗಳು ಸಮ್ಮತವಲ್ಲ‘ ಎಂದರು. ಸುದ್ದಿಗೋಷ್ಠಿಯಲ್ಲಿ ಸಾಧಿಕ್ ಕಿರ್ಮಾನಿ ಹಾಜರಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.