ಕ್ರಿಕೆಟ್‌: ಬಿಡಿಕೆ ತಂಡಕ್ಕೆ ಜಯ ಹುಬ್ಬಳ್ಳಿ: ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ‘ಎ’ ತಂಡ, ಕೆಎಸ್‌ಸಿಎ ಧಾರವಾಡ ವಲಯದ ಮೊದಲ ಡಿವಿಷನ್‌ ಕ್ರಿಕೆಟ್ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೆಲುವು ಸಾಧಿಸಿತು. ಇಲ್ಲಿನ ರಾಜನಗರದ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ ‘ಎ’ ತಂಡ 47.5 ಓವರ್‌ಗಳಲ್ಲಿ 218 ರನ್‌ ಗಳಿಸಿ ಆಲೌಟ್‌ ಆಯಿತು. ಧ್ರುವ ನಾಯ್ಕ (86) ಅವರ ಬ್ಯಾಟಿಂಗ್‌ ಇದಕ್ಕೆ ಕಾರಣವಾಯಿತು. ಈ ಗುರಿಯನ್ನು ಬಿಡಿಕೆ 46.5 ಓವರ್‌ಗಳಲ್ಲಿ ಮುಟ್ಟಿತು. ಶುಭಂ ಉಮಜಿ (ಅಜೇಯ 109, 146ಎಸೆತ, 16 ಬೌಂಡರಿ, 1 ಸಿಕ್ಸರ್‌) ಶತಕ ಮತ್ತು ಕೃಷ್ಣಪ್ಪ ಬಗಾಡಿ (37ಕ್ಕೆ5) ಚುರುಕಿನ ಬೌಲಿಂಗ್‌ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು. ಬೆಳಗಾವಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಧಾರವಾಡದ ಎಸ್‌ಡಿಎಂ ಕ್ರಿಕೆಟ್‌ ಅಕಾಡೆಮಿ ‘ಬಿ’ ತಂಡ ಪ್ರಜ್ವಲ್‌ ಕೃಷ್ಣ (75), ನಿಹಾಲ್‌ ಶೆಟ್ಟಿ (52) ಅರ್ಧಶತಕಗಳ ಬಲದಿಂದ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 325 ರನ್‌ ಗಳಿಸಿತು. ಎದುರಾಳಿ ಬೆಳಗಾವಿಯ ದ ಯೂನಿಯನ್‌ ಜಿಮ್ಖಾನ ನಿಗದಿತ ಓವರ್‌ಗಳು ಪೂರ್ಣಗೊಂಡಾಗ 254 ರನ್ ಗಳಿಸಿತು. ಹೀಗಾಗಿ ಧಾರವಾಡದ ತಂಡಕ್ಕೆ 71 ರನ್‌ಗಳ ಗೆಲುವು ಸಾಧ್ಯವಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.