ಪ್ರಸಿದ್ಧ ಪ್ರತಿಭೆ ಮೇಲೆ ಆಸ್ಟ್ರೇಲಿಯಾ ಕೋಚ್‌ ಪ್ರಭಾವ ಚೆನ್ನೈ: ವೇಗದ ಬೌಲರ್ ಬ್ರೆಟ್ ಲೀ ಮತ್ತು ಬೆಂಗಳೂರಿನ ಮಸಾಲೆ ದೋಸೆಯನ್ನು ಇಷ್ಟಪಡುವ ಮಧ್ಯಮ ವೇಗಿ ಪ್ರಸಿದ್ಧ ಕೃಷ್ಣ ಅವರ ಪ್ರತಿಭೆ ಬೆಳಗಿದವರಲ್ಲಿ ಪ್ರಮುಖರು ಆಸ್ಟ್ರೇಲಿಯಾದ ಜೆಫ್ ಥಾಮ್ಸನ್‌. ಇಂಗ್ಲೆಂಡ್ ಎದುರಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಪ್ರಸಿದ್ಧ ಕೃಷ್ಣ ಮಂಗಳವಾರ ರಾತ್ರಿಯಿಂದ ಕ್ರಿಕೆಟ್ ಪ್ರಪಂಚದ ಗಮನ ಸೆಳೆದಿದ್ದಾರೆ. ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಪ್ರಸಿದ್ಧ 54 ರನ್‌ಗಳಿಗೆ ನಾಲ್ಕು ವಿಕೆಟ್ ಕಬಳಿಸಿದ್ದರು. ಇದು, ಪದಾರ್ಪಣೆ ಪಂದ್ಯದಲ್ಲಿ ಭಾರತೀಯ ಆಟಾರನೊಬ್ಬನ ಶ್ರೇಷ್ಠ ಸಾಧನೆಯಾಗಿದೆ. ಅವರ ಅಮೋಘ ಬೌಲಿಂಗ್‌ ಭಾರತ ತಂಡಕ್ಕೆ ಭರ್ಜರಿ ಜಯವನ್ನೂ ಗಳಿಸಿಕೊಟ್ಟಿತ್ತು. ಮೊದಲ ಸ್ಪೆಲ್‌ನ ಮೂರು ಓವರ್‌ಗಳಲ್ಲಿ 37 ರನ್ ಬಿಟ್ಟುಕೊಟ್ಟಿದ್ದರೂ ನಂತರ ಎದುರಾಳಿಗಳನ್ನು ಕಾಡಿದ್ದರಿಂದ ಈ ಪಂದ್ಯ ಅವರಿಗೆ ಹೆಚ್ಚು ‘ಪ್ರಸಿದ್ಧಿ’ ತಂದುಕೊಟ್ಟಿತ್ತು. ‘ನನ್ನ ಮೊದಲ ಪಂದ್ಯ ಏಳುಬೀಳುಗಳಿಂದ ಕೂಡಿತ್ತು. ನನ್ನ ಪಾಲಿನ ಕೊನೆಯ ಓವರ್‌ನ ಕೊನೆಯ ಎಸೆತದ ವರೆಗೂ ಏನನ್ನೂ ಹೇಳಲಾಗದ ಪರಿಸ್ಥಿತಿ ಇತ್ತು. ಅಂತೂ ಎಲ್ಲವೂ ಸುಸೂತ್ರವಾಗಿ ಮುಕ್ತಾಯಗೊಂಡಿತು. ಇನ್ನಷ್ಟು ಸಾಧನೆ ಮಾಡುವ ಹುಮ್ಮಸ್ಸು ಇದೆ’ ಎಂದು ಅವರು ಬುಧವಾರ ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ಪ್ರತಿಭೆ ಪ್ರಸಿದ್ಧ ಕೃಷ್ಣ ಅವರಿಗೆ ಮಸಾಲೆ ದೋಸೆ ಮತ್ತು ಆಸ್ಟ್ರೇಲಿಯಾದ ಬ್ರೆಟ್ ಲೀ ಇಷ್ಟ ಎಂಬ ವಿಷಯವನ್ನು ಬಹಿರಂಗ ಮಾಡಿದವರು ತಂದೆ ಮುರಳಿ ಕೃಷ್ಣ. ಜೆಫ್‌ ಥಾಮ್ಸನ್ ಅವರು ಪ್ರಸಿದ್ಧ ವೃತ್ತಿ ಬದುಕಿನಲ್ಲಿ ಪ್ರಭಾವ ಬೀರಿದ್ದಾರೆ ಎಂದೂ ಮುರಳಿ ಕೃಷ್ಣ ತಿಳಿಸಿದರು. 2017ರಲ್ಲಿ ಐಡಿಬಿಐ ಫೆಡರಲ್ ಬೌಲಿಂಗ್ ಫೌಂಡೇಷನ್‌ನ ಯೋಜನೆಯ ಅಂಗವಾಗಿ ತುಷಾರ್ ದೇಶಪಾಂಡೆ ಜೊತೆ ಪ್ರಸಿದ್ಧ ಕೃಷ್ಣ ಆಸ್ಟ್ರೇಲಿಯಾಗೆ ಪಯಣಿಸಿದ್ದರು. ಅಲ್ಲಿ ಥಾಮ್ಸನ್ ಬಳಿ ತರಬೇತಿ ಪಡೆದಿದ್ದರು. ಬ್ರಿಸ್ಬೇನ್‌ನಲ್ಲಿರುವ ಕ್ರಿಕೆಟ್ ಆಸ್ಟ್ರೇಲಿಯಾ ಅಕಾಡೆಮಿಯಲ್ಲಿ ನಡೆದ ತರಬೇತಿ ಅವರ ಪಾಲಿಗೆ ಮಹತ್ವದ್ದಾಗಿತ್ತು. ಗ್ಲೆನ್ ಮೆಗ್ರಾ ಸಲಹೆಗಳನ್ನು ನೀಡಿದ್ದರು. ವಿಶೇಷ ತಂತ್ರಗಳನ್ನು ಕಲಿಯಲು ಪ್ರಸಿದ್ಧಗೆ ಅದು ಅನುಕೂಲವಾಯಿತು. ಎಂಆರ್‌ಎಫ್‌ ಪೇಸ್ ಫೌಂಡೇಷನ್‌ನಲ್ಲೂ ಪ್ರಸಿದ್ಧ ತರಬೇತಿ ಪಡೆದುಕೊಂಡಿದ್ದಾರೆ. ಅಲ್ಲಿನ ಮುಖ್ಯ ಕೋಚ್ ಎಂ.ಸೆಂಥಿಲ್ ನಾಥನ್ ಪ್ರಕಾರ ಪ್ರಸಿದ್ಧ ಕೃಷ್ಣ ಅವರಿಗೆ ಬೌಲಿಂಗ್‌ನಲ್ಲಿದ್ದ ಚಾಣಾಕ್ಷತನವೇ ಆಸ್ಟ್ರೇಲಿಯಾದಲ್ಲಿ ತರಬೇತಿಗೆ ಆಯ್ಕೆಯಾಗಲು ಕಾರಣ. ‘11ನೇ ವಯಸ್ಸಿನಲ್ಲೇ ಪ್ರಸಿದ್ಧ ಕ್ರಿಕೆಟ್ ಆಡಲು ಆರಂಭಿಸಿದ್ದ. ಶಾಲಾ ಕ್ರಿಕೆಟ್‌ನಲ್ಲಿ ಆಲ್‌ರೌಂಡರ್ ಪಾತ್ರ ವಹಿಸಿದ್ದ. 14ನೇ ವಯಸ್ಸಿನಲ್ಲಿ ವೇಗದ ಬೌಲಿಂಗ್ ಬಗ್ಗೆ ಹೆಚ್ಚು ಆಸಕ್ತಿ ತಾಳಿದ. ಆತನ ಆಶಯಕ್ಕೆ ನಾವು ಬೆಂಬಲವಾಗಿ ನಿಂತೆವು’ ಎಂದು ಕಾಲೇಜು ತಂಡದಲ್ಲಿ ಕ್ರಿಕೆಟ್ ಆಡಿದ್ದ ಮುರಳಿ ಕೃಷ್ಣ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.