ಭುಜದ ಗಾಯ: ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯಿಂದ ಶ್ರೇಯಸ್ ಹೊರಕ್ಕೆ ಪುಣೆ: ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭುಜದ ಗಾಯಕ್ಕೆ ತುತ್ತಾಗಿರುವ ಭಾರತದ ಶ್ರೇಯಸ್ ಅಯ್ಯರ್, ಉಳಿದೆರಡು ಪಂದ್ಯಗಳಲ್ಲಿ ಆಡುವುದಿಲ್ಲ. ಅಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್‌) ಆರಂಭದ ಪಂದ್ಯಗಳಲ್ಲಿ ಅವರು ಕಣಕ್ಕಿಳಿಯುವುದು ಅನುಮಾನವಾಗಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ಇನಿಂಗ್ಸ್‌ನ ಎಂಟನೇ ಓವರ್ ವೇಳೆ ಜಾನಿ ಬೆಸ್ಟೊ ಹೊಡೆದ ಚೆಂಡನ್ನು ತಡೆಯುವ ವೇಳೆ ಶ್ರೇಯಸ್ ಭುಜಕ್ಕೆ ಪೆಟ್ಟಾಗಿತ್ತು. ಗಾಯ ಗಂಭೀರವಾಗಿದ್ದರಿಂದ ಅವರು ಕ್ರೀಡಾಂಗಣ ತೊರೆದಿದ್ದರು. ‘ಶ್ರೇಯಸ್ ಅವರು ಐಪಿಎಲ್ ಟೂರ್ನಿಯ ಮೊದಲಾರ್ಧದಷ್ಟು ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ‘ ಎಂದು ಬಿಸಿಸಿಐ ಮೂಲಗಳು ಹೇಳಿವೆ. ‘ಶ್ರೇಯಸ್ ಅವರ ಎಡ ಭುಜದಲ್ಲಿ ಮೂಳೆ ಸರಿದಿದೆ. ಇನ್ನಷ್ಟು ತಪಾಸಣೆಗಳನ್ನು ಮಾಡಲಾಗುತ್ತದೆ‘ ಎಂದು ಬಿಸಿಸಿಐ ಮಂಗಳವಾರ ಹೇಳಿತ್ತು. ಶ್ರೇಯಸ್ ಚೇತರಿಸಿಕೊಳ್ಳಲು ಆರು ವಾರಗಳ ಅವಧಿ ತೆಗೆದುಕೊಳ್ಳಬಹುದು ಎನ್ನಲಾಗಿದೆ. ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದಾರೆ. ಏಪ್ರಿಲ್ 9ರಿಂದ ಟೂರ್ನಿ ನಿಗದಿಯಾಗಿದೆ. ಶ್ರೇಯಸ್ ಕಣಕ್ಕಿಳಿಯದಿದ್ದರೆ, ಡೆಲ್ಲಿ ತಂಡದ ಸಾರಥ್ಯವನ್ನು ರಿಷಬ್ ಪಂತ್, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅಥವಾ ಅನುಭವಿ ಆಫ್‌ಸ್ಪಿನ್ನರ್‌ ಆರ್‌.ಅಶ್ವಿನ್ ವಹಿಸಿಕೊಳ್ಳುವ ಸಾಧ್ಯತೆಯಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.