ಬ್ಯಾಡ್ಮಿಂಟನ್: ಕ್ವಾರ್ಟರ್‌ಫೈನಲ್‌ಗೆ ಸೈನಾ ನೆಹ್ವಾಲ್ ಪ್ಯಾರಿಸ್ (ಪಿಟಿಐ): ಭಾರತದ ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ ಆರ್ಲಿಯನ್ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಎಂಟರ ಘಟ್ಟಕ್ಕೆ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ 18-21 21-15 21-10 ರಿಂದ ಫ್ರಾನ್ಸ್‌ನ ಮೇರಿ ಬ್ಯಾಟೊಮೆನ್ ವಿರುದ್ಧ ಜಯಿಸಿದರು. 51 ನಿಮಿಷಗಳ ಹಣಾಹಣಿಯಲ್ಲಿ ಸೈನಾ ಮೊದಲ ಗೇಮ್‌ನಲ್ಲಿ ನಿರಾಶೆ ಅನುಭವಿಸಿದ್ದರು. ನಂತರ ತಿರುಗೇಟು ನೀಡಿದ ಅವರು ಜಯವನ್ನು ಒಲಿಸಿಕೊಂಡರು. ಹೋದ ವಾರ ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕಾಲಿಗೆ ಗಾಯವಾದ ಕಾರಣ ಹಿಂದೆ ಸರಿದಿದ್ದರು. ಭಾರತದ ಇರಾ ಶರ್ಮಾ 21-18 21-13 ರಿಂದ ಬಲ್ಗೇರಿಯಾದ ಮರಿಯಾ ಮಿಟ್ಸೊವಾ ವಿರುದ್ಧ ಜಯಿಸಿ, ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಅವರು ಡೆನ್ಮಾರ್ಕ್‌ ನ ಲೈನ್ ಕ್ರಿಸ್ಟೊಫೆರಸನ್ ವಿರುದ್ಧ ಸೆಣಸುವ ಸಾಧ್ಯತೆ ಇದೆ. ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಜೋಡಿಯು ಕ್ವಾರ್ಟರ್‌ಫೈನಲ್ ತಲುಪಿದೆ. ಭಾರತದ ಜೋಡಿಯು 21–9, 17–21, 21–19ರಿಂದ ಡೆನ್ಮಾರ್ಕಿನ ಅಮೆಲಿ ಮಾಗ್ಲೆಂಡ್ ಮತ್ತು ಫ್ರೆಜಾ ರೆವನ್ ವಿರುದ್ಧ ಜಯಿಸಿತು. ಪುರುಷರ ಡಬಲ್ಸ್‌ನಲ್ಲಿ ಭಾರತದ ಎಂ.ಆರ್. ಅರ್ಜುನ್ ಮತ್ತು ಧ್ರುವ ಕಪಿಲಾ 21–14, 21–16 ರಿಂದ ಇಂಗ್ಲೆಂಡ್‌ನ ಮ್ಯಾಥ್ಯೂ ಕ್ಲೇರ್ ಮತ್ತು ಏಥಾನ್ ವ್ಯಾನ್ ಲೀಯುನ್ ವಿರುದ್ಧ ಜಯಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.