ಧೋನಿ ಸಾರಥ್ಯದಲ್ಲಿ ಆಡುವುದು ಬೌಲರ್‌ಗಳಿಗೆ ಇಷ್ಟ: ಕೆ.ಗೌತಮ್‌ ಚೆನ್ನೈ: ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಆಡುವುದನ್ನು ಬೌಲರ್‌ಗಳು ಇಷ್ಟಪಡುತ್ತಾರೆ. ಏಕೆಂದರೆ ಬೌಲರ್‌ಗಳಿಂದ ಉತ್ತಮ ಸಾಮರ್ಥ್ಯ ಹೊರಹೊಮ್ಮಿಸುವ ಕಲೆ ಅವರಿಗೆ ತಿಳಿದಿದೆ ಎಂದು ಐಪಿಎಲ್ ಫ್ರಾಂಚೈಸ್‌ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‌ರೌಂಡರ್, ಕನ್ನಡಿಗ ಕೆ.ಗೌತಮ್ ಅಭಿಪ್ರಾಯಪಟ್ಟಿದ್ದಾರೆ. ‘ಮಹಿ ಭಾಯ್‌ (ಧೋನಿ) ಸಾರಥ್ಯದಲ್ಲಿ ಆಡುವುದು ಬೌಲರ್‌ಗಳಿಗೆ ಇಷ್ಟ. ಏಕೆಂದರೆ ಅವರ ಶಕ್ತಿ, ಸಾಮರ್ಥ್ಯ ಅರಿತುಕೊಳ್ಳುವ ಧೋನಿ, ಶ್ರೇಷ್ಠ ಆಟ ಹೊಮ್ಮುವಂತೆ ಮಾಡುತ್ತಾರೆ‘ ಎಂದು ಗೌತಮ್ ಹೇಳಿದ್ದಾಗಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವೆಬ್‌ಸೈಟ್‌ ಉಲ್ಲೇಖಿಸಿದೆ. ‘ಧೋನಿ ನಾಯಕತ್ವದಲ್ಲಿ ಆಡುವುದು ನನ್ನ ಕನಸಾಗಿತ್ತು. ಅದು ಈಗ ನನಸಾಗಿದೆ. ಟೂರ್ನಿಯ ಪ್ರಮುಖ ತಂಡವಾಗಿರುವ ಸಿಎಸ್‌ಕೆ ಪರ ಆಡಲಿದ್ದೇನೆ ಎಂಬ ಯಾವುದೇ ಒತ್ತಡಗಳು ನನ್ನ ಮೇಲೆ ಇಲ್ಲ‘ ಎಂದು ಈ ಹಿಂದೆ ಪಂಜಾಬ್ ಕಿಂಗ್ಸ್ ತಂಡದ ಪರ ಆಡಿದ್ದ ಗೌತಮ್ ಹೇಳಿದ್ದಾರೆ. ‘ಆಲೋಚನಾ ಪ್ರಕ್ರಿಯೆಯಲ್ಲಿನ ಸ್ಪಷ್ಟತೆ ಹಾಗೂ ಸಂಘಟನಾ ಶಕ್ತಿಯು ಸಿಎಸ್‌ಕೆ ತಂಡವನ್ನು ಐಪಿಎಲ್‌ನ ಇತರೆ ತಂಡಗಳಿಗಿಂತ ಭಿನ್ನವಾಗಿಸಿದೆ‘ ಎಂದು ಗೌತಮ್‌ ನುಡಿದರು. ಸಿಎಸ್‌ಕೆ ಆಟಗಾರರು ಸದ್ಯ ಮುಂಬೈನಲ್ಲಿದ್ದು, ಐಪಿಎಲ್ ಟೂರ್ನಿಯ ಮೊದಲ ಐದು ಪಂದ್ಯಗಳನ್ನು ಇಲ್ಲಿಯೇ ಆಡಲಿದ್ದಾರೆ. ಏಪ್ರಿಲ್ 10ರಂದು ತನ್ನ ಮೊದಲ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಧೋನಿ ನಾಯಕತ್ವದ ತಂಡ ಸೆಣಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.