ಬಿಹಾರ ಕ್ರಿಕೆಟ್ ಲೀಗ್‌: ಬಿಸಿಎ ಮೇಲೆ ಬಿಸಿಸಿಐ ಕೆಂಗಣ್ಣು ನವದೆಹಲಿ: ಅನುಮತಿ ಇಲ್ಲದೇ ಬಿಹಾರ ಕ್ರಿಕೆಟ್ ಲೀಗ್‌ (ಬಿಸಿಎಲ್) ಆಯೋಜಿಸಿದ ಬಿಹಾರ ಕ್ರಿಕೆಟ್ ಸಂಸ್ಥೆ (ಬಿಸಿಎ) ಮತ್ತು ಲೀಗ್‌ನಲ್ಲಿ ಆಡಿದ ಆಟಗಾರರ ಮೇಲೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೆಂಗಣ್ಣು ಬೀರಿದ್ದು ಕ್ರಮಕ್ಕೆ ಮುಂದಾಗಿದೆ. ಇದೇ ತಿಂಗಳ 20ರಿಂದ 26ರ ವರೆಗೆ ಊರ್ಜ ಕ್ರೀಡಾಂಗಣದಲ್ಲಿ ಬಿಸಿಎಲ್‌ ಆಯೋಜಿಸಲಾಗಿತ್ತು. ಆಂಗಿಕ ಅವೆಂಜರ್ಸ್‌, ಭಗಲ್‌ಪುರ್ ಬುಲ್ಸ್‌, ಧರ್ಭಾಂಗ ಡೈಮಂಡ್ಸ್‌, ಗಯಾ ಗ್ಲೇಡಿಯೇಟರ್ಸ್‌ ಮತ್ತು ಪಟ್ನಾ ಪೈಲಟ್ಸ್ ತಂಡಗಳು ಪಾಲ್ಗೊಂಡಿದ್ದ ಟೂರ್ನಿಯ ಪಂದ್ಯಗಳನ್ನು ಯೂರೊಸ್ಪೋರ್ಟ್‌ ಚಾನಲ್ ನೇರ ಪ್ರಸಾರ ಮಾಡಿತ್ತು. ಧರ್ಭಾಂಗ ಡೈಮಂಡ್ಸ್ ಚಾಂಪಿಯನ್ ಆಗಿತ್ತು. ಅನುಮತಿ ಇಲ್ಲದೇ ನಡೆಸುತ್ತಿರುವ ಟೂರ್ನಿಯನ್ನು ರದ್ದುಪಡಿಸಬೇಕು ಎಂದು ಸೂಚಿಸಿ ಬಿಸಿಸಿಐ 23ರಂದು ಬಿಸಿಎಗೆ ನೋಟಿಸ್ ನೀಡಿತ್ತು. ಅದಕ್ಕೆ ಸೊಪ್ಪು ಹಾಕದ ಬಿಸಿಎ ಟೂರ್ನಿಯನ್ನು ಮುಂದುವರಿಸಿತ್ತು. ಹೀಗಾಗಿ ಕ್ರಮ ಕೈಗೊಳ್ಳಲು ಮುಂದಾಗಿರುವುದಾಗಿ ಬಿಸಿಸಿಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಾಂಗ್ ಅಮೀನ್ ಬಿಸಿಎಗೆ ತಿಳಿಸಿದ್ದಾರೆ. ಬೆಟ್ಟಿಂಗ್‌ ಮತ್ತಿತರ ಪ್ರಕರಣಗಳು ಬೆಳಕಿಗೆ ಬರಲು ಆರಂಭವಾದ ನಂತರ ಭ್ರಷ್ಟಾಚಾರ ನಿಯಂತ್ರಣ ಘಟಕದ ಶಿಫಾರಸಿನ ಆಧಾರದಲ್ಲಿ ಬಿಸಿಸಿಐ ಇತ್ತೀಚೆಗೆ ರಾಜ್ಯ ಘಟಕಗಳು ನಡೆಸುವ ಟಿ20 ಟೂರ್ನಿಗಳ ಮೇಲೆ ನಿಯಂತ್ರಣ ಹೇರಲು ಮುಂದಾಗಿದೆ. ‘ತನ್ನ ಹಠ ಸಾಧಿಸುವುದಕ್ಕಾಗಿ ಬಿಸಿಎ ಯುವ ಆಟಗಾರರ ಭವಿಷ್ಯವನ್ನು ಹಾಳು ಮಾಡಿದೆ. ನಿಯಮ 31ರ ಅಡಿಯಲ್ಲಿ ಬಿಸಿಸಿಐ ಆ ಆಟಗಾರರ ಮೇಲೆ ನಿಷೇಧ ಹೇರುವುದೇ? ಬಿಹಾರ ಕ್ರಿಕೆಟ್ ಸಂಸ್ಥೆಗೆ ನೀಡುವ ವಾರ್ಷಿಕ ಅನುದಾನ ತಡೆಹಿಡಿಯುವುದೇ?’ ಎಂದು ಐಪಿಎಲ್ ಸ್ಪಾಟ್‌ ಫಿಕ್ಸಿಂಗ್‌ಗೆ ಸಂಬಂಧಿಸಿ ದೂರು ದಾಖಲಿಸಿರುವ ಆದಿತ್ಯ ವರ್ಮಾ ಪ್ರಶ್ನಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.