: ತಂಡ ಸೇರಿದ ಅಶ್ವಿನ್‌, ಅಕ್ಷರ್, ಪಾಂಡ್ಯ ಸಹೋದರರು ಮುಂಬೈ: ಆಫ್ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್‌, ಆಲ್‌ರೌಂಡರ್ ಅಕ್ಷರ್ ಪಟೇಲ್ ಮತ್ತು ವೇಗಿ ಕ್ರಿಸ್ ವೋಕ್ಸ್ ಅವರು ಐಪಿಎಲ್‌ನಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ತಂಗಿರುವ ಹೋಟೆಲ್ ಸೇರಿದ್ದು ಕ್ವಾರಂಟೈನ್‌ಗೆ ತಯಾರಾಗಿದ್ದಾರೆ. ಮುಂಬೈ ಇಂಡಿಯನ್ಸ್‌ನ ಸೂರ್ಯಕುಮಾರ್ ಯಾದವ್, ಪಾಂಡ್ಯ ಸಹೋದರರಾದ ಹಾರ್ದಿಕ್ ಮತ್ತು ಕೃಣಾಲ್ ಕೂಡ ಕ್ವಾರಂಟೈನ್‌ಗೆ ಸಿದ್ಧರಾಗಿದ್ದಾರೆ. ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಅಮೋಘ ಸಾಧನೆ ಮಾಡಿರುವ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಬಳಗವನ್ನು ಕಂಗೆಡಿಸಿದ್ದರು. ಗಾಯದ ಸಮಸ್ಯೆಯಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಐಪಿಎಲ್‌ಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಆಟಗಾರರು ಒಂದು ವಾರ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಏಪ್ರಿಲ್ ಒಂಬತ್ತರಂದು ಆರಂಭವಾಗುವ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಪಂದ್ಯವನ್ನು 10ರಂದು ಆಡಲಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಈ ಪಂದ್ಯ ನಡೆಯಲಿದೆ. ಪಾಂಡ್ಯ ಸಹೋದರರು ಹಾಜರ್‌ ಸೂರ್ಯಕುಮಾರ್ ಯಾದವ್ ಮತ್ತು ಪಾಂಡ್ಯ ಸಹೋದರರು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡರು. ಪುಣೆಯಲ್ಲಿ ನಡೆದಿದ್ದ ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಆಡಿದ ತಂಡದಲ್ಲಿ ಈ ಮೂವರು ಇದ್ದರು. ಕೃಣಾಲ್ ಪಾಂಡ್ಯ ಸರಣಿಯಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರೆ ಸೂರ್ಯಕುಮಾರ್‌ ಮೂರೂ ಪಂದ್ಯಗಳಲ್ಲಿ ಬೆಂಚ್‌ನಲ್ಲಿದ್ದರು. ‘ಭಾರತ ತಂಡದಲ್ಲಿ ಸ್ಥಾನ ಗಳಿಸಬೇಕೆಂಬುದು ಕನಸಾಗಿತ್ತು. ಅದು ನನಸಾಗಿದೆ. ಪದಾರ್ಪಣೆಗೆ ಅವಕಾಶ ಸಿಗದಿದ್ದರೂ ತಂಡದೊಂದಿಗೆ ಇರಲು ಸಾಧ್ಯವಾದ್ದದ್ದು ಖುಷಿ ನೀಡಿದೆ. ಈಗ ಮುಂಬೈ ಇಂಡಿಯನ್ಸ್ ಕುಟುಂಬವನ್ನು ಸೇರಿದ್ದು ಐಪಿಎಲ್‌ನಲ್ಲಿ ಉತ್ತಮ ಸಾಧನೆ ಮಾಡುವ ಭರವಸೆ ಇದೆ’ ಎಂದು ತಂಡ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಸೂರ್ಯಕುಮಾರ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೆಣಸಲಿದೆ. ಚೆನ್ನೈನಲ್ಲಿ ಈ ಹಣಾಹಣಿ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.