ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ ಹನುಮ, ಅಭಿಮನ್ಯು ಕೋಲ್ಕತ್ತ: ಟೆಸ್ಟ್ ಪರಿಣತ ಬ್ಯಾಟರ್‌ ಹನುಮ ವಿಹಾರಿ ಮತ್ತು ಬಂಗಾಳ ಕ್ರಿಕೆಟ್‌ ತಂಡದ ನಾಯಕ ಅಭಿಮನ್ಯು ಈಶ್ವರನ್ ಸೇರಿದಂತೆ ಭಾರತದ ಏಳು ಮಂದಿ ಆಟಗಾರರು ಢಾಕಾ ಪ್ರೀಮಿಯರ್‌ ಲೀಗ್‌ (ಡಿಪಿಎಲ್‌) ಏಕದಿನ ಟೂರ್ನಿಯಲ್ಲಿ ಆಡಲಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಹರಾಜಾಗದೆ ಉಳಿದ ಭಾರತದ ಆಟಗಾರರಿಗೆ ಡಿಪಿಎಲ್ ಒಂದು ಮುಕ್ತ ಅವಕಾಶವಾಗಿದೆ. ಹನುಮ ಅವರು ಡಿಪಿಎಲ್‌ನಲ್ಲಿ ಅಬಹಾನಿ ಲಿಮಿಟೆಡ್‌ ಪರ ಕಣಕ್ಕಿಳಿಯಲಿದ್ದಾರೆ. ಅಭಿಮನ್ಯು ಈಶ್ವರನ್‌ ಅವರು ಪ್ರೈಮ್‌ ಬ್ಯಾಂಕ್‌ ಕ್ರಿಕೆಟ್‌ ಕ್ಲಬ್‌ ಪರ ಮೂರನೇ ಬಾರಿ ಆಡಲಿದ್ದಾರೆ. ಈ ಹಿಂದೆ 2017 ಮತ್ತು 2018ರಲ್ಲಿ ಈ ತಂಡವನ್ನು ಪ್ರತಿನಿಧಿಸಿದ್ದರು. ಡಿಪಿಎಲ್‌ ಆಹ್ವಾನಿತ ಟೂರ್ನಿಯಾಗಿದ್ದು, ಈಶ್ವರನ್‌ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಸೋಮವಾರ ಅನುಮತಿ ಪಡೆದಿದ್ದಾರೆ. ಪರ್ವೇಜ್ ರಸೂಲ್‌, ಬಾಬಾ ಅಪರಾಜಿತ್‌, ಅಶೋಕ್ ಮನೇರಿಯಾ, ಚಿರಾಗ್ ಜಾನಿ, ಗುರಿಂದರ್‌ ಸಿಂಗ್‌ ಟೂರ್ನಿಯಲ್ಲಿ ಆಡಲಿರುವ ಭಾರತದ ಇನ್ನುಳಿದ ಆಟಗಾರರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.