ಕರಾಚಿ ಟೆಸ್ಟ್‌: ಬಾಬರ್ ಶತಕ; ಅಸ್ಟ್ರೇಲಿಯಾ ಕನಸಿಗೆ ಅಡ್ಡಿ ಕರಾಚಿ: ನಾಯಕ ಬಾಬರ್ ಆಜಂ ಅವರು ಮೋಹಕ ಶತಕ ಸಿಡಿಸಿ ಆಸ್ಟ್ರೇಲಿಯಾದ ಗೆಲುವಿನ ಕನಸಿಗೆ ಅಡ್ಡಿಯಾದರು. ಮಾತ್ರವಲ್ಲದೆ ಪಾಕಿಸ್ತಾನ ತಂಡದಲ್ಲಿ ಜಯದ ಭರವಸೆ ಮೂಡಿಸಿದರು. ಇಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ 506 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಪಾಕಿಸ್ತಾನ ನಾಲ್ಕನೇ ದಿನದಾಟದ ಮುಕ್ತಾಯಕ್ಕೆ ಎರಡು ವಿಕೆಟ್‌ಗಳಿಗೆ 192 ರನ್ ಗಳಿಸಿದೆ. ಗೆಲುವಿಗೆ ಕೊನೆಯ ದಿನ ತಂಡ 314 ರನ್ ಗಳಿಸಬೇಕಾಗಿದೆ. ಗೆದ್ದರೆ ಟೆಸ್ಟ್ ಇತಿಹಾಸದಲ್ಲಿ ಹೊಸ ದಾಖಲೆ ಮೂಡಲಿದೆ. ಎರಡು ರನ್ ಗಳಿಸುವಷ್ಟರಲ್ಲಿ ಪಾಕಿಸ್ತಾನ ಮೊದಲ ವಿಕೆಟ್ ಕಳೆದುಕೊಂಡಿತ್ತು. ಇಮಾಮ್ ಉಲ್ ಹಕ್‌ ಒಂದು ರನ್ ಗಳಿಸಿ ಸ್ಪಿನ್ನರ್ ನೇಥನ್ ಲಯನ್‌ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದಿದ್ದರು. 21 ರನ್ ಗಳಿಸುವಷ್ಟರಲ್ಲಿ ಅಜರ್ ಅಲಿ ಕೂಡ ವಾಪಸಾದರು. ಈ ಸಂದರ್ಭದಲ್ಲಿ ಅಬ್ದುಲ್ಲ ಶಫೀಕ್ ಅವರ ಜೊತೆಗೂಡಿದ ಬಾಬರ್ ಎದುರಾಳಿ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. 12 ಬೌಂಡರಿಗಳೊಂದಿಗೆ 197 ಎಸೆತಗಳಲ್ಲಿ 102 ರನ್ ಗಳಿಸಿದ ಅವರಿಗೆ ಉತ್ತಮ ಸಹಕಾರ ನೀಡಿದ ಅಬ್ದುಲ್ಲ ಒಂದು ಸಿಕ್ಸರ್‌ ಮತ್ತು ನಾಲ್ಕು ಬೌಂಡರಿಗಳನ್ನೊಳಗೊಂಡ 71 ರನ್ ಕಲೆ ಹಾಕಿದರು. ಇದಕ್ಕಾಗಿ 226 ಎಸೆತ ಎದುರಿಸಿದ್ದರು. ಮುರಿಯದ ಮೂರನೇ ವಿಕೆಟ್‌ಗೆ ಇಬ್ಬರೂ 171 ರನ್ ಸೇರಿಸಿದ್ದಾರೆ. ಬಾಬರ್‌ ಅವರದು ಇದು ಆರನೇ ಟೆಸ್ಟ್ ಶತಕವಾಗಿದ್ದು ಆಸ್ಟ್ರೇಲಿಯಾ ವಿರುದ್ಧದ ಎರಡು ಬಾರಿ ಮೂರಂಕಿ ಮೊತ್ತ ದಾಟಿದ ಸಾಧನೆ ಮಾಡಿದರು. ಆಫ್‌ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ಅವರ ಎಸೆತವನ್ನು ಸ್ವೀಪ್ ಮಾಡಿ ಎರಡು ರನ್ ಗಳಿಸುವ ಮೂಲಕ ಬಾಬರ್ ಶತಕ ಪೂರೈಸಿದರು. 21 ಇನಿಂಗ್ಸ್‌ಗಳಲ್ಲಿ ಶತಕದ ಬರ ಅನುಭವಿಸಿದ್ದ ಅವರು ಸಂಭ್ರಮದ ಅಲೆಯಲ್ಲಿ ಮಿಂದರು. 2020ರ ಫೆಬ್ರುವರಿಯಲ್ಲಿ ರಾವಲ್ಪಿಂಡಿಯಲ್ಲಿ ನಡೆದ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಅವರು ಕೊನೆಯದಾಗಿ ಶತಕ ಬಾರಿಸಿದ್ದರು. ಭಾನುವಾರದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಒಂದು ವಿಕೆಟ್ ಕಳೆದುಕೊಂಡು 81 ರನ್ ಗಳಿಸಿದ್ದ ಆಸ್ಟ್ರೇಲಿಯಾ ಸೋಮವಾರ 26 ನಿಮಿಷ ಬ್ಯಾಟಿಂಗ್ ಮಾಡಿತು. 2ಕ್ಕೆ 97 ರನ್ ಗಳಿಸಿದ್ದಾಗ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಮೊತ್ತ ಬೆನ್ನತ್ತಿ ಗೆದ್ದ ದಾಖಲೆ ವೆಸ್ಟ್ ಇಂಡೀಸ್ ಹೆಸರಿನಲ್ಲಿದೆ. 2003ರಲ್ಲಿ ಆಂಟಿಗಾದಲ್ಲಿ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ 7ಕ್ಕೆ 418 ರನ್ ಗಳಿಸಿ ವೆಸ್ಟ್ ಇಂಡೀಸ್ ಜಯ ಗಳಿಸಿತ್ತು. ಪಾಕಿಸ್ತಾನ ಯಶಸ್ವಿಯಾಗಿ ಬೆನ್ನತ್ತಿದ ಗರಿಷ್ಠ ಮೊತ್ತ 377 ರನ್‌. 2015ರಲ್ಲಿ ಶ್ರೀಲಂಕಾದಲ್ಲಿ ತಂಡ ಈ ಸಾಧನೆ ಮಾಡಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.