ನೀಗಿದ ಪಾಕ್‌ ಜಯದ ಬರ: ವಿಂಡೀಸ್ ಕನಸಿಗೆ ‘ಬರೆ’ ಹ್ಯಾಮಿಲ್ಟನ್: ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ಗಳಿಸುವ ಮೂಲಕ ಪಾಕಿಸ್ತಾನ ತಂಡ ಮಹಿಳೆಯರ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಗೆಲುವಿನ ಬರವನ್ನು ನೀಗಿಸಿಕೊಂಡಿತು. ಸೆಡಾನ್ ಪಾರ್ಕ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಎಂಟು ವಿಕೆಟ್‌ಗಳಿಂದ ಗೆದ್ದಿತು. ವಿಶ್ವಕಪ್‌ನ 19 ಪಂದ್ಯಗಳಲ್ಲಿ ತಂಡಕ್ಕೆ ಇದು ಮೊದಲ ಜಯ. ಮಳೆಯಿಂದಾಗಿ ತಡವಾಗಿ ಆರಂಭಗೊಂಡ ಪಂದ್ಯವನ್ನು 20 ಓವರ್‌ಗಳಿಗೆ ನಿಗದಿ ಮಾಡಲಾಗಿತ್ತು. ಟಾಟ್ ಗೆದ್ದ ‍‍‍‍ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೆಸ್ಟ್ ಇಂಡೀಸ್‌ನ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಸುಲಭವಾಗಿ ಕಟ್ಟಿಹಾಕುವಲ್ಲಿ ಪಾಕ್ ಬೌಲರ್‌ಗಳು ಯಶಸ್ವಿಯಾದರು. ತಂಡಕ್ಕೆ 7 ವಿಕೆಟ್‌ಗಳಿಗೆ 89 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಸಿದ್ರಾ ಅಮೀನ್ ಅವರ ವಿಕೆಟ್ ಬೇಗನೇ ಕಳೆದುಕೊಂಡಿತು. ಆದರೆ ಮುನೀಬಾ ಅಲಿ, ನಾಯಕಿ ಬಿಸ್ಮಾ ಮರೂಫ್ ಮತ್ತು ನಾಲ್ಕನೇ ಕ್ರಮಾಂಕದ ಒಮೈಮಾ ಸೊಹೇಲ್ ಅವರು ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಮುನೀಬಾ ಮತ್ತು ಬಿಸ್ಮಾ ಜೋಡಿ ಎರಡನೇ ವಿಕೆಟ್‌ಗೆ 35 ರನ್ ಸೇರಿಸಿದರು. ಮುನೀಬಾ ಔಟಾದ ನಂತರ ಬಿಸ್ಮಾ ಮತ್ತು ಒಮೈಮಾ ಮುರಿಯದ ಮೂರನೇ ವಿಕೆಟ್‌ಗೆ 33 ರನ್ ಸೇರಿಸಿ ತಂಡವನ್ನು ಜಯದ ದಡ ಸೇರಿಸಿದರು. 2009ರ ವಿಶ್ವಕಪ್‌ನಲ್ಲಿ ಕೊನೆಯದಾಗಿ ಪಾಕಿಸ್ತಾನ ಜಯ ಗಳಿಸಿತ್ತು. ವಿಶೇಷವೆಂದರೆ ಆ ಪಂದ್ಯದಲ್ಲೂ ಪಾಕಿಸ್ತಾನದ ಎದುರಾಳಿ ವೆಸ್ಟ್ ಇಂಡೀಸ್ ಆಗಿತ್ತು. ನಿದಾ ದಾರ್ ಜೀವನಶ್ರೇಷ್ಠ ಬೌಲಿಂಗ್‌ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಪರ ಆರಂಭಿಕ ಬ್ಯಾಟರ್ ಡಿಯಾಂಡ್ರ ದೊತಿನ್, ನಾಯಕಿ ಸ್ಟೆಫಾನಿ ಟೇಲರ್ ಮತ್ತು 9ನೇ ಕ್ರಮಾಂಕದ ಅಲಿಯಾ ಅಲೀನ್ ಅವರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ಎರಡಂಕಿ ಮೊತ್ತ ದಾಟಲು ಆಗಲಿಲ್ಲ. ಇಬ್ಬರು ಶೂನ್ಯಕ್ಕೆ ಔಟಾದರು. ಆಫ್‌ ಬ್ರೇಕ್ ಬೌಲರ್ ನಿದಾ ದಾರ್ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿ 10 ರನ್‌ಗಳಿಗೆ 4 ವಿಕೆಟ್ ಉರುಳಿಸಿದರು. ಜಯ ಗಳಿಸಿದರೂ ಪಾಕಿಸ್ತಾನಕ್ಕೆ ಸೆಮಿಫೈನಲ್‌ಗೆ ಪ್ರವೇಶಿಸಲು ಸಾಧ್ಯವಿಲ್ಲ. ಆದರ ವೆಸ್ಟ್ ಇಂಡೀಸ್‌ ತಂಡದ ಹಾದಿ ಕಠಿಣವಾಗಿದೆ. ಗುರುವಾರ ದಕ್ಷಿಣ ಆಫ್ರಿಕಾವನ್ನು ಮಣಿಸಿದರೆ ತಂಡದ ಆಸೆ ಜೀವಂತವಾಗಿರಲಿದೆ. ಆದರೆ ಭಾರತ ಮತ್ತು ಇಂಗ್ಲೆಂಡ್ ತಂಡಗಳ ಫಲಿತಾಂಶವೂ ಅದರ ಮೇಲೆ ಪ್ರಭಾವ ಬೀರಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.