2022: ಆರ್‌ಸಿಬಿ ಪೂರ್ವಸಿದ್ಧತಾ ಶಿಬಿರ ಸೇರಿಕೊಂಡ ವಿರಾಟ್ ಕೊಹ್ಲಿ ಬೆಂಗಳೂರು: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)2022ರ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತಯಾರಿ ನಡೆಸುತ್ತಿದ್ದು, ಮಾಜಿ ನಾಯಕ ವಿರಾಟ್ ಕೊಹ್ಲಿ ಸೋಮವಾರ ತಂಡವನ್ನು ಸೇರಿಕೊಂಡಿದ್ದಾರೆ. ಇತರ ಆಟಗಾರರು ಈಗಾಗಲೇ ಪೂರ್ವಸಿದ್ಧತಾ ಶಿಬಿರಕ್ಕೆ ಸೇರಿದ್ದರಿಂದ ಕಳೆದ ಹಲವು ದಿನಗಳಿಂದ ಕೊಹ್ಲಿಯ ಯೋಜನೆಗಳ ಬಗ್ಗೆ ಅಭಿಮಾನಿಗಳಲ್ಲಿ ಪ್ರಶ್ನೆ ಎದ್ದಿತ್ತು. ಸೋಮವಾರ ಆರ್‌ಸಿಬಿ ಬಹು ನಿರೀಕ್ಷಿತ ಸುದ್ದಿಯನ್ನು ಟ್ವೀಟ್ ಮಾಡಿದೆ. ಆರ್‌ಸಿಬಿಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ, ‘ಕಿಂಗ್ ಕೊಹ್ಲಿ ಬಂದಿದ್ದಾರೆ! ಅದೇ ಇಂದಿನ ಸುದ್ದಿ’ಎಂದು ಟ್ವೀಟ್ ಮಾಡಲಾಗಿದೆ. ಕೊಹ್ಲಿಯ ಆಗಮನದ ಕೆಲವು ಚಿತ್ರಗಳನ್ನೂ ಟ್ವೀಟ್ ಮಾಡಲಾಗಿದೆ. ನಗುಮುಖದಲ್ಲಿ ಕೊಹ್ಲಿ ಕೋಣೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕೊಹ್ಲಿ ಆಗಮನದ ವಿಡಿಯೊ ತುಣುಕುಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. 2008 ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ಕೊಹ್ಲಿ ರಾಯಲ್ ಚಾಲೆಂಜರ್ಸ್‌ನಲ್ಲಿದ್ದಾರೆ. ಎಂಟು ಆವೃತ್ತಿಗಳಲ್ಲಿ ತಂಡವನ್ನು ಮುನ್ನಡೆಸಿರುವ ಅವರು, ಇತ್ತೀಚೆಗೆ ಆರ್‌ಸಿಬಿ ನಾಯಕತ್ವ ತೊರೆದಿದ್ದರು. ಬಳಿಕ, ದಕ್ಷಿಣ ಆಫ್ರಿಕಾ ಬ್ಯಾಟರ್ ಫಾಫ್ ಡುಪ್ಲೆಸಿ ಅವರನ್ನು ನಾಯಕನಾಗಿ ನೇಮಕ ಮಾಡಲಾಗಿದೆ. 33 ವರ್ಷದ ಕೊಹ್ಲಿ ಐಪಿಎಲ್‌ನಲ್ಲಿ 207 ಪಂದ್ಯಗಳಿಂದ 37.39 ಸರಾಸರಿಯಲ್ಲಿ 6283 ರನ್ ಗಳಿಸಿದ್ದಾರೆ. 129.54 ಸ್ಟ್ರೈಕ್ ರೇಟ್‌ ಹೊಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.