: ರಾಜಸ್ತಾನ್ ರಾಯಲ್ಸ್–ಸನ್‌ರೈಸರ್ಸ್ ಹೈದರಾಬಾದ್‌ಗೆ ಶುಭಾರಂಭದ ಕನಸು ‍ಪುಣೆ: ಬಲಿಷ್ಠ ಆಟಗಾರರನ್ನು ಹೊಂದಿರುವ ರಾಜಸ್ಥಾನ್ ರಾಯಲ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ 15ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಸೆಣಸಲಿದೆ. ಮಹಾರಾಷ್ಟ್ರ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಂಗಣ ಈ ಬಾರಿಯ ಟೂರ್ನಿಯ ಮೊದಲ ಪಂದ್ಯಕ್ಕೆ ಮಂಗಳವಾರ ಆತಿಥ್ಯ ನೀಡಲಿದ್ದು ಮಾಜಿ ಚಾಂಪಿಯನ್ನರ್ ಮುಖಾಮುಖಿ ಕುತೂಹಲ ಕೆರಳಿಸಿದೆ. ನಾಯಕ ಸಂಜು ಸ್ಯಾಮ್ಸನ್ ಅವರ ಮೇಲೆ ರಾಜಸ್ಥಾನ್ ರಾಯಲ್ಸ್‌ನ ಬ್ಯಾಟಿಂಗ್ ವಿಭಾಗ ಭರವಸೆ ಇರಿಸಿಕೊಂಡಿದೆ. ಆದರೆ ಅನಿಶ್ಚಿತತೆಯು ಅವರ ಬ್ಯಾಟಿಂಗ್‌ನ ದೌರ್ಬಲ್ಯವಾಗಿದ್ದು ಅದರಿಂದ ಹೊರಬರಲು ಪ್ರಯತ್ನಿಸಬೇಕಾಗಿದೆ. ಬ್ಯಾಟಿಂಗ್‌ನಲ್ಲಿ ಮಿಂಚಿದರೆವರ್ಷಾಂತ್ಯದಲ್ಲಿ ನಡೆಯಲಿರುವ ಟ್ವೆಂಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲೂ ಸ್ಥಾನ ಭದ್ರಪಡಿಸಿಕೊಳ್ಳಲು ಅವರಿಗೆ ಅವಕಾಶವಿದೆ. 2008ರ ಮೊದಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದ ರಾಜಸ್ಥಾನ್ ರಾಯಲ್ಸ್‌ಗೆ ಮತ್ತೆ ಚಾಂಪಿಯನ್ ಪಟ್ಟ ದೊರಕಿಸಿಕೊಡುವ ಅವರ ಕನಸು ನನಸಾಗಬೇಕಾದರೆ ಗೆಲುವಿನ ಆರಂಭ ಸಿಗಬೇಕಾಗಿದೆ. ದೇವದತ್ತ ಪಡಿಕ್ಕಲ್ ಮತ್ತು ಜೋಸ್ ಬಟ್ಲರ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಶಿಮ್ರಾನ್ ಹೆಟ್ಮೆಯರ್, ರಸಿ ವ್ಯಾನ್ ಡೆರ್ ಡುಸೆನ್, ಜಿಮ್ಮಿ ನೀಶಮ್, ರಯಾನ್ ಪರಾಗ್ ಮುಂತಾದವರ ಬಲ ತಂಡಕ್ಕಿದೆ. ಬೌಲಿಂಗ್‌ನಲ್ಲಿ ಆಫ್‌ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಭರವಸೆ ತುಂಬಿದ್ದಾರೆ. ಅನುಭವಿ ನಾಯಕ ಕೇನ್ ವಿಲಿಯಮ್ಸನ್ ಅವರು ಸನ್‌ರೈಸರ್ಸ್‌ನ ಬ್ಯಾಟಿಂಗ್ ವಿಭಾಗದ ಚುಕ್ಕಾಣಿಯನ್ನೂ ಹಿಡಿದಿದ್ದಾರೆ. ಗ್ಲೆನ್ ಫಿಲಿಪ್ಸ್‌, ನಿಕೋಲಸ್ ಪೂರನ್, ಪ್ರಿಯಂ ಗರ್ಗ್‌ ಮತ್ತು ರಾಹುಲ್ ಟ್ರಿಪಾಠಿ ಅವರಿಂದಲೂ ಉತ್ತಮ ಸಾಮರ್ಥ್ಯದ ನಿರೀಕ್ಷೆ ಇದೆ. ಆರ್.ಸಮರ್ಥ್ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಆರಂಭಿಸುತ್ತಾರೆ ಎಂಬುದು ಕೂಡ ಕುತೂಹಲ ಕೆರಳಿಸಿದೆ. ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಅವರಿಗೆ ವೇಗದ ಬೌಲರ್ ಉಮ್ರನ್ ಮಲಿಕ್, ಎಡಗೈ ವೇಗಿ ಟಿ.ನಟರಾಜನ್, ಸ್ಪಿನ್ನರ್‌ಗಳಾದ ವಾಷಿಂಗ್ಟನ್ ಸುಂದರ್, ಶ್ರೇಯಸ್ ಗೋಪಾಲ್ ಮತ್ತು ಜೆ.ಸುಚಿತ್ ಅವರ ಬೆಂಬಲವಿದೆ. ಮುಖಾಮುಖಿ ಪಂದ್ಯಗಳು 15 ಹೈದರಾಬಾದ್ ಜಯ 8 ರಾಜಸ್ಥಾನ್ ಜಯ 7 ಆರಂಭ: ರಾತ್ರಿ 7.30 ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಐಪಿಎಲ್‌ನಲ್ಲಿ ನಾಯಕರ ಬಲಾಬಲ ಆಟಗಾರ;ತಂಡ;ಪಂದ್ಯ;ರನ್;ಗರಿಷ್ಠ;ಶತಕ;ಅರ್ಧಶತಕ;ಸಿಕ್ಸರ್‌;ಬೌಂಡರಿ ಕೇನ್ ವಿಲಿಯಮ್ಸನ್;ಹೈದರಾಬಾದ್;63;1885;89*;–;17;56;166 ಸಂಜು ಸ್ಯಾಮ್ಸನ್;ರಾಜಸ್ಥಾನ್;121;3068;119;3;15;132;236 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.