ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ರನ್: ಕೊಹ್ಲಿ, ರೋಹಿತ್ ಸಾಲಿಗೆ ಸೇರಲಿದ್ದಾರೆ ಧೋನಿ ಐಪಿಎಲ್‌–2022 ಕ್ರಿಕೆಟ್‌ ಟೂರ್ನಿಗೂ ಮುನ್ನ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡದ ನಾಯಕತ್ವವನ್ನು ತ್ಯಜಿಸಿದ್ದಾರೆ. ತಂಡದ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವ ಅವರು, ವಿಕೆಟ್‌ ಕೀಪರ್‌ ಮತ್ತು ಬ್ಯಾಟರ್ ಆಗಿ ಮುಂದುವರಿಯಲಿದ್ದಾರೆ. ಹೀಗಾಗಿ, ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ ಭಾರತೀಯರ ಬ್ಯಾಟರ್‌ಗಳು ಎನಿಸಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಇತರ ಐವರೊಂದಿಗೆ ಸ್ಥಾನ ಹಂಚಿಕೊಳ್ಳುವ ಅವಕಾಶ ಧೋನಿಗಿದೆ. ಇದನ್ನೂ ಓದಿ: 2022 | ಧೋನಿ ನಾಯಕತ್ವ ಪರ್ವಕ್ಕೆ ತೆರೆ: ಜಡೇಜಗೆ ಆರಂಭ ಟಿ20 ಮಾದರಿಯಲ್ಲಿ ಇದುವರೆಗೆ 347 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಧೋನಿ 38.31ರ ಸರಾಸರಿಯಲ್ಲಿ6,935 ರನ್ ಕಲೆಹಾಕಿದ್ದಾರೆ. 7,000 ರನ್ ಗಳಿಸಲುಅವರಿಗೆ ಇನ್ನು ಕೇವಲ 65 ರನ್ ಬೇಕಾಗಿದೆ. ಇದರೊಂದಿಗೆ ಈಮೈಲಿಗಲ್ಲು ತಲುಪಿದ ಭಾರತದ 6ನೇ ಹಾಗೂ ವಿಶ್ವದ 34ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. 7,000ಕ್ಕಿಂತ ಹೆಚ್ಚು ರನ್ ಗಳಿಸಿದಭಾರತೀಯರ ಪೈಕಿ 'ಕಿಂಗ್' ಕೊಹ್ಲಿ (10,273 ರನ್‌) ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ 'ಹಿಟ್‌ಮ್ಯಾನ್' ರೋಹಿತ್ (9,895 ರನ್‌), 'ಗಬ್ಬರ್' ಶಿಖರ್ ಧವನ್ (8,775 ರನ್‌),'ಮಿಸ್ಟರ್‌ ಐಪಿಎಲ್' ಸುರೇಶ್ ರೈನಾ (8,654 ರನ್‌) ಮತ್ತು ಕನ್ನಡಿಗ ರಾಬಿನ್ ಉತ್ತಪ್ಪ(7,042 ರನ್‌) ಇದ್ದಾರೆ. ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ 1,617 ರನ್‌ ಗಳಿಸಿದ್ದಾರೆ. 4,746ರನ್‌ಗಳು ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್‌ ಹಾಗೂ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌ ಪರ ಬಂದಿವೆ. ಉಳಿದ 572 ರನ್‌ಗಳು ದೇಶೀ ಕ್ರಿಕೆಟ್‌ನಲ್ಲಿ ಜಾರ್ಖಂಡ್ ತಂಡದ ಪರ ಮೂಡಿಬಂದಿವೆ. ಇದನ್ನೂ ಓದಿ: 2022: ಎಲ್ಲ 10 ತಂಡಗಳ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ 200 ಕ್ಯಾಚ್ ಸನಿಹ ಧೋನಿ ಈವರೆಗೆ ಚುಟುಕು ಕ್ರಿಕೆಟ್‌ನಲ್ಲಿ198 ಕ್ಯಾಚ್ ಪಡೆದಿದ್ದಾರೆ. ಇನ್ನೆರಡು ಕ್ಯಾಚ್ ಪಡೆದರೆ ದ್ವಿಶಕತದ ಸಾಧನೆ ಮಾಡಿದಂತಾಗಲಿದೆ. ಧೋನಿ, 2008ರಲ್ಲಿ ಐಪಿಎಲ್‌ ಮೊದಲ ಆವೃತ್ತಿ ಆರಂಭವಾದಾಗಿನಿಂದ ಇದುವರೆಗೆ ಕೇವಲ ಒಮ್ಮೆ ಮಾತ್ರವೇ ಬೇರೆಯವರ ನಾಯಕತ್ವದಲ್ಲಿ ಆಡಿದ್ದಾರೆ. 2017ರಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ನಾಯಕತ್ವದಲ್ಲಿ ಪುಣೆ ಪರ ವಿಕೆಟ್‌ಕೀಪರ್‌, ಬ್ಯಾಟರ್‌ ಆಗಿ ಕಾಣಿಸಿಕೊಂಡಿದ್ದರು. ಚೆನ್ನೈ ಸೂಪರ್‌ಕಿಂಗ್ಸ್‌ ತಂಡ ಐಪಿಎಲ್‌ನ14 ಆವೃತ್ತಿಗಳ ಪೈಕಿ 12ರಲ್ಲಿ ಕಣಕ್ಕಿಳಿದಿದೆ. ಈ ಪೈಕಿ 9 ಬಾರಿ ತಂಡವನ್ನು ಫೈನಲ್‌ಗೆ ಕೊಂಡೊಯ್ದ ಶ್ರೇಯ ಧೋನಿಯದ್ದು. ಅದರಲ್ಲಿ ನಾಲ್ಕು ಬಾರಿ ಚಾಂಪಿಯನ್‌ ಆಗಿರುವ ಸಿಎಸ್‌ಕೆ, 5 ಸಲ ರನ್ನರ್ಸ್‌ ಅಪ್‌ ಎನಿಸಿಕೊಂಡಿದೆ.2016 ಹಾಗೂ 2017ರಲ್ಲಿ ಚೆನ್ನೈ ಮತ್ತು ರಾಜಸ್ಥಾನ ರಾಯಲ್ಸ್‌ ತಂಡಗಳನ್ನು ನಿಷೇಧಿಸಲಾಗಿತ್ತು. ಸದ್ಯ ಧೋನಿ ನಂತರ ಆಲ್‌ರೌಂಡರ್ ರವೀಂದ್ರ ಜಡೇಜ ಸಿಎಸ್‌ಕೆ ತಂಡವನ್ನು ಈ ಬಾರಿ ಮುನ್ನಡೆಸಲಿದ್ದಾರೆ. ಮಾರ್ಚ್‌ 26ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವಉದ್ಘಾಟನಾ ಪಂದ್ಯದಲ್ಲಿ ಜಡೇಜ ಪಡೆ ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧ ಸೆಣಸಲಿದೆ. ಇದನ್ನೂ ಓದಿ: 2022: ಐಪಿಎಲ್ ಚಾಂಪಿಯನ್, ರನ್ನರ್-ಅಪ್ ತಂಡಗಳ ಪಟ್ಟಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.