ಲಯನ್ಸ್‌ ಕ್ಲಬ್‌ಗೆ ಪ್ರಶಸ್ತಿ ಬೆಂಗಳೂರು: ಜಿಬಿನ್ ಜಾನ್ (147) ಗಳಿಸಿದ ಅಮೋಘ ಶತಕ ವ್ಯರ್ಥವಾಯಿತು. ಗೌತಮ್ ರೆಡ್ಡಿ ಆಲ್‌ರೌಂಡ್‌ ಆಟದ ಬಲದಿಂದ ಲಯನ್ಸ್ ಕ್ಲಬ್ ತಂಡವು ಜೆ.ಬಿ. ಮಲ್ಲಾರಾಧ್ಯ ಟ್ರೋಫಿಗಾಗಿ ನಡೆದ ಕೆಎಸ್‌ಸಿಎ ಒಂದರಿಂದ ಐದನೇ ಡಿವಿಷನ್‌ ಲೀಗ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು. ಎಎಂಸಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ‍ಫೈನಲ್ ಪಂದ್ಯದಲ್ಲಿ ಲಯನ್ಸ್ 39 ರನ್‌ಗಳಿಂದ ಜೈದೂರ್ ಕ್ರಿಕೆಟರ್ಸ್ ತಂಡವನ್ನು ಮಣಿಸಿತು. ಮೊದಲು ಬ್ಯಾಟ್ ಮಾಡಿದ ಲಯನ್ಸ್ 50 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ ಕಳೆದುಕೊಂಡು 303 ರನ್‌ ಗಳಿಸಿತು. ಜೈದೂರ್‌ ತಂಡವನ್ನು 264 ರನ್‌ಗಳಿಗೆ ನಿಯಂತ್ರಿಸಿತು. ಜೈದೂರ್ ತಂಡದ ಜಿಬಿನ್‌ 139 ಎಸೆತಗಳನ್ನು ಎದುರಿಸಿ 17 ಬೌಂಡರಿ, ಮೂರು ಸಿಕ್ಸರ್‌ಗಳನ್ನು ಸಿಡಿಸಿದರು. ಲಯನ್ಸ್ ತಂಡದ ಗೌತಮ್‌ ಆರ್‌. ರೆಡ್ಡಿ (59ಕ್ಕೆ 5) ಬೌಲಿಂಗ್‌ನಲ್ಲಿ ಮಿಂಚಿದರು. ವಿಜೇತ ತಂಡದ ಇನಿಂಗ್ಸ್‌ನಲ್ಲಿ ವೆಂಕಿ (75) ಮಿನುಗಿದರು. ಗೌತಮ್‌ ರೆಡ್ಡಿ (63) ಅರ್ಧಶತಕ ದಾಖಲಿಸಿದರು. ಸಂಕ್ಷಿಪ್ತ ಸ್ಕೋರು: ಲಯನ್ಸ್ ಕ್ರಿಕೆಟ್‌ ಕ್ಲಬ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 303 (ರಾಘವೇಂದ್ರ ಎಚ್‌. 28, ಎಂ. ವಿನೋದ್‌ ಕುಮಾರ್‌ 41, ಗೌತಮ್ ಆರ್‌. ರೆಡ್ಡಿ 63, ನಾರಾಯಣಸ್ವಾಮಿ ಎಚ್‌.ಸಿ. 35; ಪ್ರತಾಪ್‌ 60ಕ್ಕೆ 3, ಶರತ್‌ ಎಸ್‌.ಯು. 18ಕ್ಕೆ 2). ಜೈದೂರ್‌ ಕ್ರಿಕೆಟರ್ಸ್: 47.1 ಓವರ್‌ಗಳಲ್ಲಿ 264 (ಜಿಬಿನ್ ಜಾನ್‌ 147, ವಿನಯ್‌ ಕುಮಾರ್‌ ಕೆ. 24; ಗೌತಮ್ ಆರ್‌. ರೆಡ್ಡಿ 59ಕ್ಕೆ 5, ಅಕ್ಷಯ್ ಕುಮಾರ್‌ ಎಂ. 32ಕ್ಕೆ 2). ಫಲಿತಾಂಶ: ಲಯನ್ಸ್‌ ಕ್ರಿಕೆಟ್‌ ಕ್ಲಬ್‌ಗೆ 39 ರನ್‌ಗಳ ಜಯ ಮತ್ತು ಪ್ರಶಸ್ತಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.