ಐಪಿಎಲ್‌: ಕೇನ್‌ ವಿಲಿಯಮ್ಸನ್‌ಗೆ ₹ 12 ಲಕ್ಷ ದಂಡ ಪುಣೆ: ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ಮಾಡಿದ್ದಕ್ಕೆ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಅವರು ₹ 12 ಲಕ್ಷ ದಂಡಕ್ಕೆ ಗುರಿಯಾಗಿದ್ದಾರೆ. 'ಮಾರ್ಚ್‌ 29ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದ ವಿರುದ್ಧ ನಡೆದ ಐಪಿಎಲ್‌ 2022 ಟೂರ್ನಿಯ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ನಡೆಸಿದ್ದಕ್ಕೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ದಂಡ ವಿಧಿಸಲಾಗಿದೆ' ಎಂದು ಐಪಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ. 'ಇದು ಐಪಿಎಲ್‌ ನೀತಿ ಸಂಹಿತೆಗೆ ಸಂಬಂಧಿಸಿ ಸನ್‌ರೈಸರ್ಸ್‌ ತಂಡದ ಮೊದಲ ತಪ್ಪಾಗಿದೆ. ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಅವರಿಗೆ ₹ 12 ಲಕ್ಷ ದಂಡ ಹಾಕಲಾಗಿದೆ' ಎಂದು ಪ್ರಕಟಣೆಯಲ್ಲಿ ವಿವರಿಸಿದೆ. ಮಂಗಳವಾರ ನಡೆದ ಪಂದ್ಯದಲ್ಲಿ 61 ರನ್‌ಗಳಿಂದ ವಿಲಿಯಮ್ಸನ್‌ ಪಡೆ ಸೋಲನುಭವಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.