ಬಾಬರ್ ಆಜಂ ಐಸಿಸಿ ತಿಂಗಳ ಆಟಗಾರ ದುಬೈ: ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ನೀಡುವ ‘ತಿಂಗಳ ಆಟಗಾರ‘ ಗೌರವಕ್ಕೆ ಭಾಜನರಾಗಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌ ರಚೆಲ್ ಹೇಯ್ನ್ಸ್‌ ಮಹಿಳೆಯರ ವಿಭಾಗದಲ್ಲಿ ಈ ಶ್ರೇಯ ಗಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗೆ ಕೊನೆಗೊಂಡ ಟೆಸ್ಟ್ ಸರಣಿಯಲ್ಲಿ ಬಾಬರ್ ಒಟ್ಟು 390 ರನ್‌ ಗಳಿಸಿದ್ದರು. ವೆಸ್ಟ್ ಇಂಡೀಸ್‌ನ ಕ್ರೇಗ್ ಬ್ರಾಥ್‌ವೇಟ್‌, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಬಾಬರ್ ಎರಡನೇ ಬಾರಿ ಈ ಗೌರವ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. 2021ರ ಏಪ್ರಿಲ್‌ನಲ್ಲೂ ಅವರಿಗೆ ಪ್ರಶಸ್ತಿ ಒಲಿದಿತ್ತು. ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿಅಮೋಘ ಸಾಮರ್ಥ್ಯ ತೋರಿದ್ದಕ್ಕಾಗಿ ರಚೆಲ್ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಟೂರ್ನಿಯ ಎಂಟು ಪಂದ್ಯಗಳಲ್ಲಿ ಅವರು 61.28ರ ಸರಾಸರಿಯಲ್ಲಿ ಒಟ್ಟು 429 ರನ್‌ ಕಲೆಹಾಕಿದ್ದರು. ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್‌ ಮತ್ತು ದಕ್ಷಿಣ ಆಫ್ರಿಕಾದ ಲೌರಾ ವೊಲ್ವವಾರ್ಡ್‌ ಅವರನ್ನು ಹಿಂದಿಕ್ಕಿ ರಚೆಲ್‌ ಈ ಗೌರವ ಪಡೆದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.