ಟಿ20 ಕ್ರಿಕೆಟ್: ಮೊದಲ ಪಂದ್ಯ ಇಂದು; ವಿಂಡೀಸ್‌ಗೆ ಭಾರತದ ಸವಾಲು ತರೋಬಾ, ಪೋರ್ಟ್ ಆಫ್‌ ಸ್ಪೇನ್: ಮುಂಬರಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಸಂಭವನೀಯ ಆಟಗಾರರ ಭಾರತ ತಂಡವು ಶುಕ್ರವಾರ ಇಲ್ಲಿ ವೆಸ್ಟ್ ಇಂಡೀಸ್ ಎದುರು ಆರಂಭವಾಗಲಿರುವ ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ ತಂಡಕ್ಕೆ ಮರಳಿದ್ದು ನಾಯಕತ್ವ ವಹಿಸಲಿದ್ದಾರೆ. ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಕೆ.ಎಲ್. ರಾಹುಲ್ ಮತ್ತು ಕುಲದೀಪ್ ಯಾದವ್ ಕೂಡ ಮರಳಿದ್ದಾರೆ. ಆದರೆ ರಾಹುಲ್ ಮತ್ತು ಕುಲದೀಪ್ ಅವರು ‘ಮ್ಯಾಚ್‌ ಫಿಟ್‌ನೆಸ್’ ಬಗ್ಗೆ ಇನ್ನೂ ಖಚಿತವಾಗಿಲ್ಲ. ಆದ್ದರಿಂದ ಅಂತಿಮ ಹನ್ನೊಂದರ ಬಳಗದಲ್ಲಿ ಅವರು ಸ್ಥಾನ ಪಡೆಯುವುದು ಕೂಡ ಇನ್ನೂ ಖಚಿತವಾಗಿಲ್ಲ. ವಿರಾಟ್ ಕೊಹ್ಲಿ ಈ ಸರಣಿಯಿಂದಲೂ ವಿಶ್ರಾಂತಿ ತೆಗೆದು ಕೊಂಡಿದ್ದಾರೆ. ಆದ್ದರಿಂದ ಕೊಹ್ಲಿ ಜಾಗದಲ್ಲಿ ದೀಪಕ್ ಹೂಡಾ ಅಥವಾ ಶ್ರೇಯಸ್ ಅಯ್ಯರ್ ಅವ ರಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ. ರಿಷಭ್ ಪಂತ್ ಮರಳಿರುವುದರಿಂ ದಾಗಿ ದಿನೇಶ್ ಕಾರ್ತಿಕ್‌ಗೆ ಕೀಪಿಂಗ್ ಅವಕಾಶ ಸಿಗಲಿಕ್ಕಿಲ್ಲ. ಆದರೆ ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರನಾಗಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚು. ಇಂಗ್ಲೆಂಡ್‌ನಲ್ಲಿ ಸರಣಿ ಜಯ, ವಿಂಡೀಸ್‌ ಎದುರಿನ ಏಕದಿನ ಸರಣಿಯ ಗೆಲುವುಗಳಿಂದ ತಂಡದ ಆತ್ಮವಿಶ್ವಾಸ ಹೆಚ್ಚಿದೆ. ಆದರೆ ವಿಂಡೀಸ್ ಬಳಗವು ಚುಟುಕು ಕ್ರಿಕೆಟ್‌ನಲ್ಲಿ ತನ್ನ ಸಾಮರ್ಥ್ಯವನ್ನು ಪಣಕ್ಕೊಡ್ಡುವ ಸವಾಲು ಎದುರಿ ಸುತ್ತಿದೆ. ದೊಡ್ಡ ಹೊಡೆತಗಳ ಪರಾಕ್ರಮವನ್ನು ತೋರಿದರೆ ಮಾತ್ರ ಭಾರತದ ಬೌಲಿಂಗ್ ಪಡೆ ಮೇಲೆ ಒತ್ತಡ ಹಾಕಲು ಸಾಧ್ಯ. ಪಂದ್ಯ: ರಾತ್ರಿ 8ರಿಂದ ನೇರಪ್ರಸಾರ: ಡಿಡಿ ಸ್ಪೋರ್ಟ್ಸ್, ಫ್ಯಾನ್‌ಕೋಡ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.