ಸನ್‌ರೈಸರ್ಸ್‌ಗೆ ಮಣಿದ ಟೈಟನ್ಸ್‌ ನವಿ ಮುಂಬೈ (ಪಿಟಿಐ): ಅನುಭವಿ ಆಟಗಾರ, ನಾಯಕ ಕೇನ್ ವಿಲಿ ಯಮ್ಸನ್ ಜೊತೆ ಇನಿಂಗ್ಸ್ ಆರಂಭಿಸಿದ ಯುವ ಆಟಗಾರ ಅಭಿಷೇಕ್ ಶರ್ಮಾ ಮತ್ತೊಮ್ಮೆ ಮಿಂಚಿದರು. ಇವರಿಬ್ಬರ ಸೊಗಸಾದ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಗೆಲುವು ಸಾಧಿಸಿತು. ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು ಸನ್‌ರೈಸರ್ಸ್ ಹೈದರಾಬಾದ್ 8 ವಿಕೆಟ್‌ಗಳ ಗೆಲುವು ಸಾಧಿಸಿತು. ನಾಯಕ ಹಾರ್ದಿಕ್ ಪಾಂಡ್ಯ ಗಳಿಸಿದ ತಾಳ್ಮೆಯ ಅರ್ಧಶತಕದ ಬಲದಿಂದ ಗುಜರಾತ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 162 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಹೈದರಾಬಾದ್ ಐದು ಎಸೆತಗಳು ಬಾಕಿ ಇರುವಾಗ 2 ವಿಕೆಟ್‌ಗಳಿಗೆ 168 ರನ್ ಗಳಿಸಿ ದಡ ಸೇರಿತು. ಮೊದಲ ವಿಕೆಟ್‌ಗೆ ಅಭಿಷೇಕ್ ಶರ್ಮಾ ಮತ್ತು ಕೇನ್ ವಿಲಿಯಮ್ಸನ್ 64 ರನ್ ಸೇರಿಸಿ ಉತ್ತಮ ತಳಪಾಯ ಹಾಕಿಕೊಟ್ಟರು. ಅರ್ಧಶತಕದತ್ತ ಹೆಜ್ಜೆ ಹಾಕಿದ್ದ ಅಭಿಷೇಕ್ ವಿಕೆಟ್ ಪಡೆದು ರಶೀದ್ ಖಾನ್ ಜೊತೆಯಾಟ ಮುರಿದರು. ಕೇನ್ ಅಮೋಘ ಬ್ಯಾಟಿಂಗ್ ಮುಂದುವರಿಸಿದರು. 4 ಭರ್ಜರಿ ಸಿಕ್ಸರ್‌ಗಳು ಅವರ ಬ್ಯಾಟಿನಿಂದ ಸಿಡಿದವು. ಅವರು ಔಟಾದಾಗ ತಂಡದ ಗೆಲುವಿಗೆ 34 ರನ್ ಬೇಕಾಗಿತ್ತು. ಈ ಸಂದರ್ಭದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ನಿಕೋಲಸ್ ಪೂರನ್ ಸುಲಭ ಜಯ ತಂದುಕೊಟ್ಟರು. 20ನೇ ಓವರ್‌ನ ಮೊದಲ ಎಸೆತವನ್ನು ಅವರು ಸಿಕ್ಸರ್‌ಗೆ ಎತ್ತಿದರು. ಹಾರ್ದಿಕ್ ಪಾಂಡ್ಯ–ಅಭಿನವ್‌ ಬಲ: ಟಾಸ್ ಗೆದ್ದ ಸನ್‌ರೈಸರ್ಸ್‌ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವಿಕೆಟ್‌ಗಳನ್ನು ಕಳೆದುಕೊಂಡು ಪತನದತ್ತ ಸಾಗಿದ್ದ ಗುಜರಾತ್‌ ತಂಡಕ್ಕೆ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಕನ್ನಡಿಗ ಅಭಿನವ್ ಮನೋಹರ್‌ ಆಸರೆಯಾದರು. ಇವರಿಬ್ಬರ ಉತ್ತಮ ಜೊತೆಯಾಟದ ನೆರವಿನಿಂದ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ಸ್ಫೋಟಕ ಬ್ಯಾಟರ್ ಶುಭಮನ್ ಗಿಲ್ ಕೇವಲ ಏಳು ರನ್ ಗಳಿಸಿ ಔಟಾದರು. ರಾಹುಲ್ ತ್ರಿಪಾಠಿ ಪಡೆದ ಮೋಹಕ ಕ್ಯಾಚ್‌ಗೆ ಅವರು ಬಲಿಯಾದರು. ಭುವನೇಶ್ವರ್ ಕುಮಾರ್ ಹಾಕಿದ ಎಸೆತ ಆಫ್ ಸ್ಟಂಪ್‌ನಿಂದ ಆಚೆ ಹೋಗುತ್ತಿತ್ತು. ಡ್ರೈವ್ ಮಾಡಲು ಪ್ರಯತ್ನಿಸಿದ ಶುಭಮನ್ ಅವರ ಬ್ಯಾಟಿನ ಅಂಚಿಗೆ ಸವರಿದ ಚೆಂಡು ಸ್ಲಿಪ್‌ನತ್ತ ಚಿಮ್ಮಿತು. ತ್ರಿಪಾಠಿ ಎಡಕ್ಕೆ ಜಿಗಿದು ಕ್ಯಾಚ್ ಪಡೆದರು. ಆರಂಭಿಕ ಬ್ಯಾಟರ್ ಮ್ಯಾಥ್ಯೂ ವೇಡ್ ಜೊತೆಗೂಡಿದ ಸಾಯ್ ಸುದರ್ಶನ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ನಟರಾಜನ್ ಎಸೆತದಲ್ಲಿ ಮಿಡ್‌ಆಫ್‌ನಲ್ಲಿ ವಿಲಿಯಮ್ಸನ್ ಪಡೆದ ಕ್ಯಾಚಿಗೆ ಸುದರ್ಶನ್ ವಿಕೆಟ್ ಕಳೆದುಕೊಂಡಾಗ ತಂಡದ ಮೊತ್ತ 50 ಕೂಡ ಆಗಿರಲಿಲ್ಲ. ಉಮ್ರನ್ ಮಿಲಿಕ್ ಎಸೆತದಲ್ಲಿ ಮ್ಯಾಥ್ಯೂ ವೇಡ್ ಎಲ್‌ಬಿಡಬ್ಲ್ಯುಗೆ ಒಳಗಾದರು. ನಾಯಕ ಹಾರ್ದಿಕ್ ಪಾಂಡ್ಯ ಕ್ರೀಸ್‌ಗೆ ಬಂದ ನಂತರ ತಂಡದ ಮೊತ್ತ ಏರುಗತಿಯಲ್ಲಿ ಸಾಗಿತು. ಅವರೊಂದಿಗೆ ಡೇವಿಡ್ ಮಿಲ್ಲರ್ 40 ರನ್‌ಗಳ ಜೊತೆಯಾಟವಾಡಿದರು. ಮಿಲ್ಲರ್ ಔಟಾದ ನಂತರ ಅಭಿನವ್ ಮನೋಹರ್ ಮಿಂಚಿದರು. ಹಾರ್ದಿಕ್ ಪಾಂಡ್ಯ ಅರ್ಧಶತಕ ಪೂರೈಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.