2022 : ರಾಹುಲ್–ರಿಷಭ್ ಕದನ ಕುತೂಹಲ ಮುಂಬೈ: ಭಾರತ ಕ್ರಿಕೆಟ್ ತಂಡದ ಭವಿಷ್ಯದ ನಾಯಕರೆಂದೇ ಪರಿಗಣಿಸಲಾಗಿರುವ ಕೆ.ಎಲ್‌.ರಾಹುಲ್ ಮತ್ತು ರಿಷಭ್ ಪಂತ್ ಅವರ ಮುಖಾಮುಖಿಗೆ ವೇದಿಕೆ ಸಜ್ಜುಗೊಂಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ಮತ್ತು ರಿಷಭ್ ಮುನ್ನಡೆಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಗುರುವಾರ ಮುಖಾಮುಖಿಯಾಗಲಿವೆ. ಸ್ಫೋಟಕ ಮತ್ತು ತಂತ್ರಶಾಲಿ ಬ್ಯಾಟಿಂಗ್ ಮೂಲಕ ಪಂದ್ಯ ಗೆಲ್ಲಿಸಿಕೊಡಬಲ್ಲ ಸಾಮರ್ಥ್ಯ ಹೊಂದಿರುವವರು ರಾಹುಲ್ ಮತ್ತು ರಿಷಭ್‌ ಪಂತ್. ನಿರ್ಧಾರ ಕೈಗೊಳ್ಳುವುದು ಸೇರಿದಂತೆ ನಾಯಕತ್ವ ಗುಣವನ್ನು ಸಾಬೀತುಪಡಿಸುವುದಕ್ಕೆ ಇಬ್ಬರಿಗೂ ಐಪಿಎಲ್ ಉತ್ತಮ ವೇದಿಕೆಯಾಗಿದೆ. ಗುರುವಾರದ ಪಂದ್ಯಕ್ಕೆ ಎನ್ರಿಚ್ ನಾರ್ಕಿಯಾ ಮತ್ತು ಡೇವಿಡ್ ವಾರ್ನರ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಲಭ್ಯವಾಗಲಿದ್ದು ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿ ಮಾರ್ಕಸ್ ಸ್ಟೋಯಿನಿಸ್ ಕಾಣಿಸಿಕೊಳ್ಳಲಿದ್ದಾರೆ. ಆದ್ದರಿಂದ ಎರಡೂ ತಂಡಗಳು ಹುಮ್ಮಸ್ಸಿನಲ್ಲಿವೆ. ಡೇವಿಡ್ ವಾರ್ನರ್ ಅವರ ಕ್ವಾರಂಟೈನ್ ಅವಧಿ ಮುಗಿದಿದ್ದು ಆಯ್ಕೆಗೆ ಲಭ್ಯ ಇದ್ದಾರೆ. ನಾರ್ಕಿಯಾ ಅವರು ಫಿಟ್‌ನೆಸ್ ಟೆಸ್ಟ್‌ನಲ್ಲಿ ತೇರ್ಗಡೆಯಾಗಿದ್ದಾರೆ. ವಾರ್ನರ್‌ಗಾಗಿ ಟಿಮ್ ಸೀಫರ್ಟ್ ಅವರನ್ನು ಅಂತಿಮ 11ರಿಂದ ಹೊರಗಿಡುವ ಸಾಧ್ಯತೆಗಳಿದ್ದು ರೋವ್ಮನ್ ಪೊವೆಲ್ ಅಥವಾ ಮುರ್ತಫಿಜುರ್ ರಹಮಾನ್ ಬದಲಿಗೆ ನಾರ್ಕಿಯಾ ಅವರನ್ನು ಕರೆಸಿಕೊಳ್ಳುವ ಸಾಧ್ಯತೆ ಇದೆ. ಲಖನೌ ತಂಡದ ಆಡಳಿತವು ಆಲ್‌ರೌಂಡರ್ ಸ್ಟೋಯಿನಿಸ್‌ಗಾಗಿ ಆ್ಯಂಡ್ರ್ಯೂ ಟೈ ಅಥವಾ ಎವಿನ್ ಲೂಯಿಸ್ ಅವರನ್ನು ಹೊರಗಿಡುವುದು ಖಚಿತ. ಕಾಡುತ್ತಿರುವ ಬೌಲಿಂಗ್ ಸಮಸ್ಯೆ ಎರಡೂ ತಂಡಗಳಿಗೆ ಬೌಲಿಂಗ್ ಸಮಸ್ಯೆ ಕಾಡುತ್ತಿದೆ. ಗೌತಮ್ ಗಂಭೀರ್ ಪೋಷಕರಾಗಿರುವ ಲಖನೌ ಈ ಸಮಸ್ಯೆಯನ್ನು ತಕ್ಕ ಮಟ್ಟಿಗೆ ಪರಿಹರಿಸಿಕೊಂಡಿದೆ. ಜೇಸನ್ ಹೋಲ್ಡರ್ ಅವರ ಉಪಸ್ಥಿತಿ ತಂಡಕ್ಕೆ ಬಲ ತುಂಬಿದೆ. ವಾರ್ನರ್ ತಂಡದಲ್ಲಿದ್ದರೆ ಡೆಲ್ಲಿಗೂ ಬಲ ಬಂದಂತೆ. ಪಂದ್ಯ ಆರಂಭ: ರಾತ್ರಿ 7.30 ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.