ಆಸ್ಟ್ರೇಲಿಯಾ ತಂಡದ ಹುದ್ದೆ ತೊರೆದ ಶ್ರೀಧರ್ ಸಿಡ್ನಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಶ್ರೀಧರನ್ ಶ್ರೀರಾಮ್ ಅವರು ಆಸ್ಟ್ರೇಲಿಯಾ ತಂಡದ ಸ್ಪಿನ್ ಬೌಲಿಂಗ್ ಕೋಚ್ ಸ್ಥಾನ ತೊರೆದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿಆಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಮತ್ತು ಫೀಲ್ಡಿಂಗ್ ಸಲಹೆಗಾರನಾಗಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ‘ಆರು ವರ್ಷಗಳಿಂದ ಆಸ್ಟ್ರೇಲಿಯಾ ತಂಡದ ಸಹಾಯಕ ಕೋಚ್ ಆಗಿದ್ದೇನೆ. ಭಾರವಾದ ಹೃದಯದಿಂದ ಈ ತಂಡದಿಂದ ದೂರವಾಗುತ್ತಿದ್ದೇನೆ. ಒಳ್ಳೆಯ ಅನುಭವ, ನೆನಪುಗಳೊಂದಿಗೆ ತಾಯ್ನಾಡಿಗೆ ತೆರಳುತ್ತಿದ್ದೇನೆ’ಎಂದು ಶ್ರೀರಾಮ್ ಹೇಳಿದ್ದಾರೆ. ಆಸ್ಟ್ರೇಲಿಯಾದ ಸ್ಪಿನ್ನರ್‌ಗಳಾದ ನೇಥನ್ ಲಯನ್, ಆ್ಯಡಂ ಜಂಪಾ, ಮಿಚೆಲ್ ಸ್ವಿಪ್ಸನ್, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಮಾರ್ನಸ್ ಲಾಬುಷೇನ್ ಅವರಿಗೂ ಶ್ರೀಧರ್ ಮಾರ್ಗದರ್ಶನ ನೀಡಿದ್ದರು. 2016ರಲ್ಲಿ ಮುಖ್ಯ ಕೋಚ್ ಆಗಿದ್ದ ಡರೆನ್ ಲೆಹ್ಮನ್ ಅವರ ತಂಡದಲ್ಲಿ ಶ್ರೀಧರ್ ಕಾರ್ಯಾರಂಭ ಮಾಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.