ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಗೆ ಶ್ರೀರಾಮ್ ಸಮೂಹ ಪ್ರಾಯೋಜಕತ್ವ ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಆಯೋಜಿಸಲಿರುವ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಪ್ರಶಸ್ತಿಗೆ ಶ್ರೀರಾಮ್ ಸಮೂಹವು ಪ್ರಾಯೋಜಕತ್ವ ನೀಡಲಿದೆ. ಮುಂದಿನ ಒಟ್ಟು ಮೂರು ಋತುಗಳಿಗೆ ಶ್ರೀರಾಮ್ ಸಮೂಹವು ಪ್ರಾಯೋಜಕತ್ವ ನೀಡಲಿದೆ. ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಈ ವಿಷಯ ಪ್ರಕಟಿಸಿದ ಕೆಎಸ್‌ಸಿಎ ಅಧ್ಯಕ್ಷ ರೋಜರ್ ಬಿನ್ನಿ ಅವರು ಶ್ರೀರಾಮ್ ಸಮೂಹವನ್ನು ಸ್ವಾಗತಿಸಿದರು. ಈ ಟೂರ್ನಿಯು ಆಗಸ್ಟ್ 7ರಂದು ಮೈಸೂರಿನಲ್ಲಿ ಆರಂಭವಾಗಲಿದೆ. ಇಲ್ಲಿ 18 ಪಂದ್ಯಗಳು ನಡೆಯಲಿವೆ. ಎರಡನೇ ಹಂತದ ಪಂದ್ಯಗಳು ಮತ್ತು ಫೈನಲ್‌ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಒಟ್ಟು ಆರು ತಂಡಗಳು ಸ್ಪರ್ಧಿಸಲಿವೆ. ಈ ಹಿಂದೆ ನಡೆದಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯು ಸ್ಥಗಿತವಾಗಿದ್ದು, ಅದೇ ಮಾದರಿಯಲ್ಲಿ ನೂತನ ಟೂರ್ನಿ ಆರಂಭವಾಗುತ್ತಿದೆ. ಆದರೆ, ಕೆಪಿಎಲ್ ಫ್ರ್ಯಾಂಚೈಸಿ ಲೀಗ್ ಆಗಿತ್ತು. ಮಹರಾಜ ಟ್ರೋಫಿ ಟೂರ್ನಿಯು ಫ್ರ್ಯಾಂಚೈಸಿ ಲೀಗ್ ಅಲ್ಲ. ಪ್ರಾಯೋಜಕತ್ವದ ಮಾದರಿಯದ್ದಾಗಿದೆ. ಶ್ರೀರಾಮ್ ಪ್ರಾಪರ್ಟಿಸ್‌ ಮುಖ್ಯಸ್ಥ ಹಾಗೂ ಆಡಳಿತ ನಿರ್ದೇಶಕ ಎಂ. ಮುರಳಿ,ನಿರ್ದೇಶಕ ಡಿ.ವಿ. ರವಿ, ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್, ಖಜಾಂಚಿ ವಿನಯ್ ಮೃತ್ಯುಂಜಯ ಮತ್ತಿತರರು ಹಾಜರಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.