ಬೆಂಗಳೂರಿಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು: ಡುಪ್ಲೆಸಿ ಬಳಗಕ್ಕೆ ಪುಟಿದೇಳುವ ತವಕ ಮುಂಬೈ: ಹ್ಯಾಟ್ರಿಕ್ ಗೆಲುವಿನ ನಂತರ ಸೋಲಿನಿಂದ ನಿರಾಶೆಗೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಶನಿವಾರ ಎದುರಿಸಲಿದೆ. ಮೊದಲ ಪಂದ್ಯದ ಸೋಲಿನ ನಂತರ ಮೂರು ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿದ್ದ ಫಫ್ ಡುಪ್ಲೆಸಿ ನಾಯಕತ್ವದ ಬೆಂಗಳೂರು ತಂಡ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಮಣಿದಿತ್ತು. ಬೌಲರ್‌ಗಳು ದುಬಾರಿಯಾದದ್ದು ಆ ಪಂದ್ಯದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಮಧ್ಯಮ ವೇಗಿ ಹರ್ಷಲ್ ಪಟೇಲ್ ಅನುಪಸ್ಥಿತಿಯಲ್ಲಿ ಕಣಕ್ಕೆ ಇಳಿದಿದ್ದ ತಂಡವನ್ನು ರಾಬಿನ್ ಉತ್ತಪ್ಪ ಮತ್ತು ಶಿವಂ ದುಬೆ ಕಾಡಿದ್ದರು. ಹೀಗಾಗಿ ಚೆನ್ನೈ ಈ ಆವೃತ್ತಿಯ ಗರಿಷ್ಠ ಮೊತ್ತ ಪೇರಿಸಿತ್ತು. ಸಂಬಂಧಿಯೊಬ್ಬರ ನಿಧನದ ಹಿನ್ನೆಲೆಯಲ್ಲಿ ಹರ್ಷಲ್ ಪಟೇಲ್ ಬಯೊಬಬಲ್ ತೊರೆದಿದ್ದರು. ಈಗ ಅವರು ತಂಡವನ್ನು ಸೇರಿಕೊಂಡಿದ್ದು ಶನಿವಾರದ ಪಂದ್ಯದ ಅಂತಿಮ 11ರಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ಮೊಹಮ್ಮದ್ ಸಿರಾಜ್, ವನಿಂದು ಹಸರಂಗ ಮತ್ತು ಆಕಾಶ್ ದೀಪ್ ಕೂಡ ತಂಡದ ಬೌಲಿಂಗ್ ವಿಭಾಗದ ಭರವಸೆಯಾಗಿದ್ದಾರೆ. ಆದರೆ ಚೆನ್ನೈ ಎದುರಿನ ಪಂದ್ಯದಲ್ಲಿ ಇವರು ದುಬಾರಿಯಾಗಿದ್ದರು. ಸ್ಪಿನ್ ಜೋಡಿ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಶಹಬಾಜ್ ಅವರಿಗೂ ಚೆನ್ನೈ ಬ್ಯಾಟರ್‌ಗಳನ್ನು ನಿಯಂತ್ರಿಸಲು ಆಗಲಿಲ್ಲ. ಹೀಗಾಗಿ ಡೆಲ್ಲಿ ಬ್ಯಾಟರ್‌ಗಳನ್ನು ಎದುರಿಸಲು ಹೊಸ ತಂತ್ರದೊಂದಿಗೆ ತಂಡ ಕಣಕ್ಕೆ ಇಳಿಯಬೇಕಾಗಿದೆ. ಬ್ಯಾಟಿಂಗ್ ವಿಭಾಗದಲ್ಲಿ ಡುಪ್ಲೆಸಿ ಮತ್ತು ಯುವ ಎಡಗೈ ಆಟಗಾರ ಅನುಜ್ ರಾವತ್ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೂಡ ಫಾರ್ಮ್‌ನಲ್ಲಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಎರಡು ಬಾರಿ 40ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆದರೆ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಭರವಸೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಕೋಲ್ಕತ್ತ ನೈಟ್‌ ರೈಡರ್ಸ್ ವಿರುದ್ಧ 44 ರನ್‌ಗಳ ಜಯ ಗಳಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಭರವಸೆಯಲ್ಲಿದೆ. ಸತತ ಎರಡು ಅರ್ಧಶತಕ ಗಳಿಸಿರುವ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಉತ್ತಮ ಲಯದಲ್ಲಿದ್ದಾರೆ. ಡೇವಿಡ್ ವಾರ್ನರ್ ಉಪಸ್ಥಿತಿ ತಂಡದ ನಿರೀಕ್ಷೆಯನ್ನು ಹೆಚ್ಚಿಸಿದೆ. ನಾಯಕ ಋಷಭ್ ಪಂತ್ ಅವರಿಗೆ ನಿರೀಕ್ಷೆಗೆ ತಕ್ಕಂತೆ ಆಡಲು ಆಗುತ್ತಿಲ್ಲ. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಖಲೀಲ್ ಅಹಮ್ಮದ್ ಅವರ ಮೇಲೆ ತಂಡ ಭರವಸೆ ಇರಿಸಿಕೊಂಡಿದೆ. ಆ್ಯನ್ರಿಚ್ ನಾರ್ಕಿಯ, ಅಕ್ಷರ್ ಪಟೇಲ್‌, ಶಾರ್ದೂಲ್ ಠಾಕೂರ್ ಮತ್ತು ಲಲಿತ್ ಯಾದವ್ ಅವರ ಬಲವೂ ತಂಡಕ್ಕಿದೆ. ಮುಂಬೈಗೆ ಜಯದ ನಿರೀಕ್ಷೆ ಆಡಿರುವ ಎಲ್ಲ ಐದು ಪಂದ್ಯಗಳನ್ನು ಸೋತಿರುವ ಮುಂಬೈ ಇಂಡಿಯನ್ಸ್ ಶನಿವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಎದುರು ಸೆಣಸಲಿದೆ. ಶೇನ್ ವಾರ್ನ್‌ಗೆ ಆರ್‌ಸಿಬಿ ಶ್ರದ್ಧಾಂಜಲಿ ಈಚೆಗೆ ಹೃದಯಾಘಾತದಿಂದ ನಿಧನರಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶ್ರದ್ಧಾಂಜಲಿ ಸಲ್ಲಿಸಿದೆ. ‘ಆರ್‌ಸಿಬಿ ಬೋಲ್ಡ್ ಡಯರೀಸ್’ನಲ್ಲಿ ಮಾತನಾಡಿದ ಮಾಜಿ ನಾಯಕ ವಿರಾಟ್ ಕೊಹ್ಲಿ ‘ಒಂದು ಸಮಯದಲ್ಲಿ ನಾನು ಶೇನ್‌ ವಾರ್ನ್ ಅವರ ಶೈಲಿಯನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದೆ’ ಎಂದಿದ್ದಾರೆ. ‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಕೂಡ ವಾರ್ನ್ ಬಗ್ಗೆ ಮಾತನಾಡಿದ್ದಾರೆ. ಆರಂಭ: ರಾತ್ರಿ 7.30 ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.