2022: ನೈಟ್‌ರೈಡರ್ಸ್‌ಗೆ ಸನ್‌ರೈಸರ್ಸ್ ಸವಾಲು ಮುಂಬೈ: ಟೂರ್ನಿಯ ಆರಂಭದಲ್ಲಿ ಸತತ ಎರಡು ಸೋಲುಗಳ ನಂತರ ಪುಟಿದೆದ್ದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವು ಶುಕ್ರವಾರ ಕೋಲ್ಕತ್ತ ನೈಟ್ ರೈಡರ್ಸ್ ಎದುರು ಕಣಕ್ಕಿಳಿಯಲಿದೆ. ಎರಡೂ ತಂಡಗಳಲ್ಲಿ ಸ್ಫೋಟಕ ಬ್ಯಾಟರ್‌ಗಳ ದಂಡು ಇದೆ. ಇದರಿಂದಾಗಿ ಬ್ರೆಬೊರ್ನ್‌ ಕ್ರೀಡಾಂಗಣದಲ್ಲಿ ರನ್‌ಗಳ ಹೊಳೆ ಹರಿಯುವ ನಿರೀಕ್ಷೆ ಇದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತ ತಂಡವು ಐದು ಪಂದ್ಯಗಳಲ್ಲಿ ಮೂರು ಗೆದ್ದು, ಎರಡರಲ್ಲಿ ಸೋತಿದೆ. ಆ್ಯಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ ರನ್‌ಗಳ ಹೊಳೆ ಹರಿಸುವ ಸಮರ್ಥರು. ಅನುಭವಿ ರಹಾನೆ ಲಯಕ್ಕೆ ಮರಳಿದರೆ ಮತ್ತಷ್ಟು ಬಲ ಹೆಚ್ಚಬಹುದು. ಉಮೇಶ್ ಯಾದವ್ ಉತ್ತಮ ಲಯದಲ್ಲಿರುವುದರಿಂದ ಕೋಲ್ಕತ್ತ ತಂಡಕ್ಕೆ ಬೌಲಿಂಗ್ ವಿಭಾಗದಲ್ಲಿ ಹೆಚ್ಚಿನ ಚಿಂತೆಯಿಲ್ಲ. ವರುಣ ಚಕ್ರವರ್ತಿ ಮತ್ತು ಸುನಿಲ್ ನಾರಾಯಣ ಸ್ಪಿನ್ ಬೌಲಿಂಗ್ ವಿಭಾಗವನ್ನು ನಿರ್ವಹಿಸುವ ಸಮರ್ಥರು. ಸನ್‌ರೈಸರ್ಸ್‌ ತಂಡದಲ್ಲಿರುವ ಸ್ವಿಂಗ್ ಪ್ರತಿಭೆ ಭುವನೇಶ್ವರ್ ಕುಮಾರ್, ಯಾರ್ಕರ್ ಪರಿಣತ ಟಿ. ನಟರಾಜನ್ ಮತ್ತು ಸ್ಪಿನ್ನರ್– ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಮುಂದೆ ಕೋಲ್ಕತ್ತದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲಿದೆ. ನಾಯಕ ಕೇನ್ ವಿಲಿಯಮ್ಸನ್ ಲಯಕ್ಕೆ ಮರಳಿರುವುದು ತಂಡದ ಬ್ಯಾಟಿಂಗ್ ವಿಭಾಗದಲ್ಲಿ ವಿಶ್ವಾಸ ಮೂಡಿಸಿದೆ. ಯುವಪ್ರತಿಭೆ ಅಭಿಷೇಕ್ ಶರ್ಮಾ ಮತ್ತು ಕೇನ್ ಕಳೆದ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದರು. ರಾಹುಲ್ ತ್ರಿಪಾಠಿ, ನಿಕೊಲಸ್ ಪೂರನ್ ಮತ್ತು ಮರ್ಕರಮ್ ತಮ್ಮ ಲಯ ಕಂಡುಕೊಂಡರೆ ತಂಡದ ಬ್ಯಾಟಿಂಗ್ ವಿಭಾಗದ ಶಕ್ತಿ ವೃದ್ಧಿಸುವುದು ಖಚಿತ. ತಂಡದಲ್ಲಿರುವ ಕನ್ನಡಿಗ ಲೆಗ್‌ಸ್ಪಿನ್‌–ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರಿಗೆ ಈ ಪಂದ್ಯದಲ್ಲಿಯೂ ಅವಕಾಶ ಸಿಗುವುದು ಖಚಿತವಿಲ್ಲ. ಪಂದ್ಯ ಆರಂಭ: ರಾತ್ರಿ 7.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್‌, ಹಾಟ್‌ಸ್ಟಾರ್ – ಬಲಾಬಲ ಪಂದ್ಯ;21 ಕೋಲ್ಕತ್ತ ಜಯ;14 ಹೈದರಾಬಾದ್;7 – *ಗರಿಷ್ಠ ಸ್ಕೋರ್ ಹೈದರಾಬಾದ್;209 ಕೋಲ್ಕತ್ತ;187 *ಕನಿಷ್ಠ ಸ್ಕೋರ್ ಹೈದರಾಬಾದ್;115 ಕೋಲ್ಕತ್ತ;101 – ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.