ರಾಷ್ಟ್ರೀಯ ಟಿ20: ಕರ್ನಾಟಕ ಮಹಿಳೆಯರಿಗೆ ಸೋಲು ಬೆಂಗಳೂರು: ಅಮನ್‌ಜೋತ್ ಕೌರ್‌ (7ಕ್ಕೆ 3) ಹಾಗೂ ರಜನಿ ದೇವಿ (13ಕ್ಕೆ 3) ಅವರ ಬೌಲಿಂಗ್ ದಾಳಿಗೆ ನಲುಗಿದ ಕರ್ನಾಟಕ ತಂಡವು ರಾಷ್ಟ್ರೀಯ ಮಹಿಳಾ ಸೀನಿಯರ್ ಟಿ20 ಟ್ರೋಫಿ ಟೂರ್ನಿಯಲ್ಲಿ ಸೋಲನುಭವಿಸಿತು. ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಚಂಡೀಗಡತಂಡವು ಕರ್ನಾಟಕದ ಎದುರು ಗೆದ್ದಿತು. ಮೊದಲು ಬ್ಯಾಟ್ ಮಾಡಿದ ಕರ್ನಾಟಕ 65 ರನ್‌ಗಳಿಗೆ ಎಲ್ಲ ವಿಕೆಟ್‌ ಕಳೆದುಕೊಂಡಿತು. ನಿಕಿ ಪ್ರಸಾದ್‌ (ಔಟಾಗದೆ 26) ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದರು. ಚಂಡೀಗಡ 17 ಓವರ್‌ಗಳಲ್ಲಿ ಗುರಿ ತಲುಪಿತು. ಶೆಫಾಲಿ ಬಳಗಕ್ಕೆ ಮಣಿದ ಹರ್ಮನ್‌ಪ್ರೀತ್ ಪಡೆ: 23 ಎಸೆತಗಳಲ್ಲಿ 50 ರನ್ ಗಳಿಸಿದ ಶೆಫಾಲಿ ವರ್ಮಾ ಹರಿಯಾಣ ತಂಡಕ್ಕೆ ಗೆಲುವು ತಂದುಕೊಟ್ಟರು. ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಅವರ ನಾಯಕತ್ವದ ತಂಡವು ಮೂರು ವಿಕೆಟ್‌ಗಳಿಂದ ಹರ್ಮನ್‌ಪ್ರೀತ್ ಕೌರ್ ಸಾರಥ್ಯದ ಪಂಜಾಬ್ ತಂಡಕ್ಕೆ ಸೋಲುಣಿಸಿತು. ಮೊದಲು ಬ್ಯಾಟ್ ಮಾಡಿದ್ದ ಹರಿಯಾಣ ಹರ್ಮನ್‌ಪ್ರೀತ್ ಅವರ ಅಮೋಘ ಅರ್ಧಶತಕದ (64, 38 ಎಸೆತ) ನೆರವಿನಿಂದ ಮೂರು ವಿಕೆಟ್‌ ಕಳೆದುಕೊಂಡು 155 ರನ್‌ ಗಳಿಸಿತ್ತು. ಹರಿಯಾಣ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಏಳು ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಸಂಕ್ಷಿಪ್ತ ಸ್ಕೋರು: ಕರ್ನಾಟಕ: 17.1 ಓವರ್‌ಗಳಲ್ಲಿ 65 (ವೇದಾ ಕೃಷ್ಣಮೂರ್ತಿ 11, ನಿಕಿ ಪ್ರಸಾದ್‌ ಔಟಾಗದೆ 26; ನಂದನಿ ಶರ್ಮಾ 18ಕ್ಕೆ 2, ಅಮನ್‌ಜೋತ್ ಕೌರ್‌ 7ಕ್ಕೆ 3, ರಜನಿ ದೇವಿ 13ಕ್ಕೆ 3). ಚಂಡೀಗಡ: 17 ಓವರ್‌ಗಳಲ್ಲಿ 4 ವಿಕೆಟ್‌ಗೆ 67 (ಮೋನಿಕಾ ಪಾಂಡೆ 13, ಪರುಷಿ ಪ್ರಭಾಕರ್‌ 16, ಅಮನ್‌ಜೋತ್ ಕೌರ್ 19; ಮೋನಿಕಾ ಪಟೇಲ್‌ 11ಕ್ಕೆ 1‌, ಶುಭಾ ಸತೀಶ್‌ 24ಕ್ಕೆ 2, ವಿ. ಚಂದು 9ಕ್ಕೆ 1). ಫಲಿತಾಂಶ: ಚಂಡೀಗಡ ತಂಡಕ್ಕೆ ಆರು ವಿಕೆಟ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.