ಮಾರ್ಷ್‌ ಆರ್‌ಟಿ-ಪಿಸಿಆರ್ ವರದಿ ನೆಗೆಟಿವ್; ಐಪಿಎಲ್ ಮೇಲಿನ ಕೋವಿಡ್ ಆತಂಕ ದೂರ ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಅವರ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯು ನೆಗೆಟಿವ್ ಬಂದಿದೆ. ಇದರಿಂದಾಗಿ ಐಪಿಎಲ್‌ಗೆ ಆವರಿಸಿದ್ದ ಕೋವಿಡ್ ಆತಂಕ ದೂರವಾಗಿದ್ದು, ಬುಧವಾರ ಡೆಲ್ಲಿ ಕಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಪಂದ್ಯವು ನಿಗದಿಯಂತೆ ನಡೆಯಲಿದೆ. ಇದನ್ನೂ ಓದಿ:ಡೆಲ್ಲಿ ತಂಡದ ಆಟಗಾರನಿಗೆ ಕೋವಿಡ್ ದೃಢ, ಪುಣೆ ಪ್ರಯಾಣ ವಿಳಂಬ ಕೋವಿಡ್ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಮಾರ್ಷ್‌ ರ್‍ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್‌ಗೆ ಒಳಗಾಗಿದ್ದರು. ಈ ವೇಳೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಬಳಿಕ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದಾರೆ. ಮಾರ್ಷ್ ಸೇರಿದಂತೆ ಡೆಲ್ಲಿ ತಂಡದ ಉಳಿದೆಲ್ಲ ಆಟಗಾರರ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯು ನೆಗೆಟಿವ್ ಬಂದಿದೆ. ಕೆಲವು ದಿನಗಳ ಹಿಂದೆಯಷ್ಟೇ ಡೆಲ್ಲಿ ತಂಡದ ಫಿಸಿಯೊ ಪ್ಯಾಟ್ರಿಕ್ ಫರ್ಹಾರ್ಟ್‌ ಅವರಿಗೆ ಕೋವಿಡ್ ದೃಢಪಟ್ಟಿತ್ತು. ಬಳಿಕ ಅವರು ಪ್ರತ್ಯೇಕವಾಸಕ್ಕೆ ಒಳಗಾಗಿದ್ದರು. ಮಿಚೆಲ್ ಮಾರ್ಷ್ ಅವರ ಆರ್‌-ಟಿಸಿಆರ್ ಪರೀಕ್ಷಾ ವರದಿಯು ನೆಗೆಟಿವ್ ಬಂದಿದೆ. ಉಳಿದೆಲ್ಲ ಆಟಗಾರರ ಪರೀಕ್ಷಾ ವರದಿಯು ಸಹ ನೆಗೆಟಿವ್ ಆಗಿದೆ. ಹಾಗಾಗಿ ಡೆಲ್ಲಿ ಹಾಗೂ ಪಂಜಾಬ್ ನಡುವಣ ಪಂದ್ಯವು ನಿಗದಿಯಂತೆ ನಡೆಯಲಿದೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ಈ ಮೊದಲು ಡೆಲ್ಲಿ ತಂಡದ ಎಲ್ಲ ಆಟಗಾರರಲ್ಲೂ ಹೋಟೆಲ್ ಕೊಠಡಿಯಲ್ಲೇ ಉಳಿದುಕೊಂಡು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.