ಒಂದೇ ಆವೃತ್ತಿಯಲ್ಲಿ ಎರಡು ಶತಕ: ಕೊಹ್ಲಿ, ಗೇಲ್ ಜೊತೆ ಸ್ಥಾನ ಹಂಚಿಕೊಂಡ ಬಟ್ಲರ್ ಮುಂಬೈ: ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್‌ ಅವರು ಈ ಬಾರಿಯ ಐಪಿಎಲ್‌ನಲ್ಲಿ 2ನೇ ಸಲ ಶತಕ ಸಿಡಿಸಿದ್ದಾರೆ. ಇದರೊಂದಿಗೆ ಅವರು ಒಂದೇ ಆವೃತ್ತಿಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಸಲ ಇನಿಂಗ್ಸ್‌ವೊಂದರಲ್ಲಿ ಮೂರಂಕಿ ರನ್ ಗಳಿಸಿದ ಆರನೇ ಆಟಗಾರ ಎಂಬ ಶ್ರೇಯ ಗಳಿಸಿದ್ದಾರೆ. ಈ ಹಿಂದೆ ಭಾರತದ ವಿರಾಟ್‌ ಕೊಹ್ಲಿ, ಶಿಖರ್‌ ಧವನ್‌, ದಕ್ಷಿಣ ಆಫ್ರಿಕಾದ ಹಾಶಿಂ ಆಮ್ಲಾ, ಆಸ್ಟ್ರೇಲಿಯಾದ ಶೇನ್‌ ವಾಟ್ಸನ್ ಮತ್ತು ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್ ಈ ಸಾಧನೆ ಮಾಡಿದ್ದರು. ಕೊಹ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಪರ 2016ರ ಆವೃತ್ತಿಯಲ್ಲಿ ನಾಲ್ಕು ಶತಕ ಗಳಿಸಿದ್ದರು. ಇದೇ ಪ್ರಾಂಚೈಸ್‌ ಪರ ಗೇಲ್‌ ಅವರು 2011ರಲ್ಲಿ 2 ಶತಕ ಬಾರಿಸಿದ್ದರು. ಆಮ್ಲಾ 2017ರಲ್ಲಿ ಪಂಜಾಬ್‌ ಕಿಂಗ್ಸ್‌ ಪರ, ವಾಟ್ಸನ್‌ 2018ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಮತ್ತು ಶಿಖರ್‌ ಧವನ್‌ 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕಾಗಿ ಎರಡೆರಡು ಶತಕ ಸಿಡಿಸಿದ್ದರು. ಇದೀಗ ಬಟ್ಲರ್‌ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಡಿ.ವೈ. ಪಾಟೀಲ್‌ ಕ್ರೀಡಾಂಗಣದಲ್ಲಿ ಏಪ್ರಿಲ್‌ 2ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 68 ಎಸೆತಗಳಲ್ಲಿ 100 ರನ್ ಗಳಿಸಿದ್ದ ಬಟ್ಲರ್‌, ಇದೀಗ ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧ ಸೋಮವಾರ (ಏಪ್ರಿಲ್‌ 18) ನಡೆದ ಪಂದ್ಯದಲ್ಲಿ 61ಎಸೆತಗಳಲ್ಲಿ 103 ರನ್‌ ಕಲೆಹಾಕಿದ್ದಾರೆ. ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ನಡೆದಈ ಪಂದ್ಯದಲ್ಲಿ ಬಟ್ಲರ್‌ ಬೀಸಾಟದ ಬಲದಿಂದ ರಾಜಸ್ಥಾನ ತಂಡ ನಿಗದಿತ 20 ಓವರ್‌ಗಳಲ್ಲಿ 217ರನ್ ಕಲೆಹಾಕಿತ್ತು. ಈ ಮೊತ್ತ ಬೆನ್ನತ್ತಿದ ಕೋಲ್ಕತ್ತ 210 ರನ್‌ ಗಳಿಸಿ ಸರ್ವಪತನ ಕಂಡಿತು. ಇದೇ ಪಂದ್ಯದಲ್ಲಿ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಹ್ಯಾಟ್ರಿಕ್‌ ಸಹಿತ 5 ವಿಕೆಟ್‌ ಪಡೆದು ಮಿಂಚಿದರು. ಚಾಹಲ್‌ ಮತ್ತು ಬಟ್ಲರ್‌ ಆಟದ ಫಲವಾಗಿ ರಾಜಸ್ಥಾನಕ್ಕೆ 7 ರನ್ ಅಂತರದ ಗೆಲುವು ಲಭಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.