2022: ಮುಂಬೈ ಹೋರಾಟಕ್ಕೆ ಬಲ ತುಂಬಿದ ವರ್ಮಾ ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಡಗೈ ಮಧ್ಯಮವೇಗಿ ಮುಖೇಶ್ ಚೌಧರಿಯ ದಾಳಿಗೆ ಕುಸಿಯುತ್ತಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ತಿಲಕ್ ವರ್ಮಾ ಜೀವ ತುಂಬಿದರು. ತಮಗೆ ಲಭಿಸಿದ ‘ಜೀವದಾನ’ವನ್ನು ಸಮರ್ಥವಾಗಿ ಬಳಸಿಕೊಂಡರು. ಅಜೇಯ ಅರ್ಧಶತಕ ಬಾರಿಸಿದ ವರ್ಮಾ (51; 43ಎ, 4X3, 6X2) ಆಟದ ನೆರವಿನಿಂದ ಮುಂಬೈ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 155 ರನ್ ಗಳಿಸಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ತಂಡಕ್ಕೆ ಮಧ್ಯಮವೇಗಿ ಮುಖೇಶ್ (19ಕ್ಕೆ3) ಉತ್ತಮ ಆರಂಭ ನೀಡಿದರು. ಕೇವಲ 23 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡ ಮುಂಬೈ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಅವಕಾಶವನ್ನು ಚೆನ್ನೈ ಕೈಚೆಲ್ಲಿತು. ಕೆಟ್ಟ ಫೀಲ್ಡಿಂಗ್ ಮತ್ತು ಕ್ಯಾಚ್‌ಗಳನ್ನು ನೆಲಕ್ಕೆ ಚೆಲ್ಲಿದ್ದು ದುಬಾರಿಯಾಯಿತು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಫೀಲ್ಡರ್‌ಗಳಲ್ಲಿ ಒಬ್ಬರಾಗಿರುವ ರವೀಂದ್ರ ಜಡೇಜ ಅವರೇ ಎರಡು ಕ್ಯಾಚ್ ಬಿಟ್ಟರು. ಶಿವಂ ದುಬೆ ಮತ್ತು ಡ್ವೆನ್ ಬ್ರಾವೊ ಕೂಡ ಕ್ಯಾಚ್ ಕೈಚೆಲ್ಲಿದರು. ಅದರಲ್ಲೂ ಐದನೇ ಓವರ್‌ನಲ್ಲಿ ತಿಲಕ್ ವರ್ಮಾ ಅವರ ಕ್ಯಾಚ್ ಪಡೆಯುವಲ್ಲಿ ಸ್ಲಿಪ್ ಫೀಲ್ಡರ್ ಬ್ರಾವೊ ವಿಫಲರಾಗಿದ್ದು ಚೆನ್ನೈಗೆ ದುಬಾರಿಯಾಯಿತು. ಮುಖೇಶ್ ಮಿಂಚು: ಮಧ್ಯಮವೇಗಿ ಮುಖೇಶ್ ಮೊದಲ ಓವರ್‌ನಲ್ಲಿ ಮುಂಬೈ ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಅವರ ವಿಕೆಟ್ ಕಬಳಿಸಿದರು. ಇಬ್ಬರೂ ಖಾತೆ ತೆರೆಯಲಿಲ್ಲ. ಮುಖೇಶ್ ತಮ್ಮ ಎರಡನೇ ಓವರ್‌ನಲ್ಲಿ ಡಿವಾಲ್ಡ್ ಬ್ರಾವಿಸ್ ವಿಕೆಟ್‌ ಅನ್ನೂ ಬುಟ್ಟಿಗೆ ಹಾಕಿಕೊಂಡರು. ಈ ಹಂತದಲ್ಲಿ ಜೊತೆಗೂಡಿದ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಬಿರುಸಿನ ಆಟ ಆರಂಭಿಸಿದರು. ಆದರೆ ಎಂಟನೇ ಓವರ್‌ನಲ್ಲಿ ಸ್ಯಾಂಟನರ್ ಬೌಲಿಂಗ್‌ನಲ್ಲಿ ಸೂರ್ಯಕುಮಾರ್ (32; 21ಎ) ಕ್ಯಾಚ್‌ ಪಡೆಯುವಲ್ಲಿ ಸಫಲರಾದ ಮುಖೇಶ್ ಸಂಭ್ರಮಿಸಿದರು. ವರ್ಮಾ ಜೊತೆಗೂಡಿದ ಹೃತಿಕ್ ಶೋಕೀನ್ (25; 25ಎ) ಐದನೇ ವಿಕೆಟ್ ಜೊತೆಯಾಟದಲ್ಲಿ 38 ರನ್‌ ಸೇರಿಸಿದರು. ಹೃತಿಕ್ ಕೂಡ ಎರಡು ಜೀವದಾನ ಪಡೆದರು. ರೋಹಿತ್‌ಗೆ 14ನೇ ಡಕ್ ಐಪಿಎಲ್‌ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ 14ನೇ ಬಾರಿ ಸೊನ್ನೆ ಸುತ್ತಿದರು. ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ’ಡಕ್‌ ಔಟ್‌’ ಆದ ಆಟಗಾರನಾದರು. ಈ ಹಿಂದೆ ಅಜಿಂಕ್ಯ ರಹಾನೆ, ಪಾರ್ಥಿವ್ ಪಟೇಲ್, ಅಂಬಟಿ ರಾಯುಡು, ಮನದೀಪ್ ಸಿಂಗ್, ಹರಭಜನ್ ಸಿಂಗ್ ಮತ್ತು ಪಿಯೂಷ್ ಚಾವ್ಲಾ ತಲಾ 13 ಬಾರಿ ಡಕ್‌ಔಟ್ ಆಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.