ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಅಕ್ಷರ್ ಜೊತೆ ಹಂಚಿ ಹೃದಯ ಗೆದ್ದ ಕುಲ್‌ದೀಪ್ ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ತಮಗೆ ದೊರಕಿದ ಪಂದ್ಯಶ್ರೇಷ್ಠ ಪುರಸ್ಕಾರವನ್ನು ಸಹ ಆಟಗಾರ ಅಕ್ಷರ್ ಪಟೇಲ್ ಅವರೊಂದಿಗೆ ಹಂಚುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಕುಲ್‌ದೀಪ್ ಯಾದವ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಬುಧವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ಇದನ್ನೂ ಓದಿ: 2022: ಐಪಿಎಲ್‌ನಲ್ಲಿ ಸ್ಮರಣೀಯ ದಾಖಲೆ ಬರೆದ ಡೇವಿಡ್ ವಾರ್ನರ್ ಡೆಲ್ಲಿ ಬೌಲರ್‌ಗಳ ದಾಳಿಗೆ ತತ್ತರಿಸಿದ ಪಂಜಾಬ್ ಕೇವಲ 115 ರನ್ನಿಗೆ ಆಲೌಟ್ ಆಗಿತ್ತು. ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್ ಹಾಗೂ ಲಲಿತ್ ಯಾದವ್ ತಲಾ ಎರಡು ವಿಕೆಟ್ ಗಳಿಸಿ ಮಿಂಚಿದ್ದರು. ಈ ಪೈಕಿ ಕುಲ್‌ದೀಪ್ 24 ರನ್ ತೆತ್ತು ಎರಡು ವಿಕೆಟ್ ಕಬಳಿಸಿದ್ದರು. ಇನ್ನೊಂದೆಡೆ ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಜಿತೇಶ್ ಕುಮಾರ್ ವಿಕೆಟ್‌ಗಳನ್ನು ಅಕ್ಷರ್ ಪಡೆದಿದ್ದರು. @imkuldeep18! 👍 👍# | # | @akshar2026 ../tgF3M4wOYo ಬಳಿಕ ಕುಲ್‌ದೀಪ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಆದರೆ ಅಕ್ಷರ್ ಜೊತೆ ಪಂದ್ಯಶ್ರೇಷ್ಠ ಪುರಸ್ಕಾರವನ್ನು ಹಂಚಿಕೊಳ್ಳಲು ಬಯಸುವುದಾಗಿ ಕುಲ್‌ದೀಪ್ ಹೇಳಿದರು. 'ಪಂದ್ಯದ ಮಧ್ಯಂತರ ಅವಧಿಯಲ್ಲಿ ಅವರು (ಅಕ್ಷರ್) ಅತ್ಯುತ್ತಮ ದಾಳಿ ಸಂಘಟಿಸಿದ್ದರಲ್ಲದೆ ವಿಕೆಟ್ ಕಬಳಿಸಿದರು. ಈ ಪ್ರಶಸ್ತಿಗೆ ಅವರು ಅರ್ಹರು ಎಂದು ನಾನು ಭಾವಿಸುತ್ತೇನೆ' ಎಂದು ಕುಲ್‌ದೀಪ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ಹೆಚ್ಚು ಸ್ಪಷ್ಟತೆಯೊಂದಿಗೆ ಆಡುತ್ತಿರುವುದಾಗಿ ಕುಲ್‌ದೀಪ್ ಹೇಳಿದರು. 'ನಾನೀಗ ನನ್ನ ಬೌಲಿಂಗ್ ಆನಂದಿಸುತ್ತಿದ್ದೇನೆ. ನಾಯಕ ರಿಷಭ್ ಪಂತ್ ಕೂಡಾ ನನ್ನ ಬೆನ್ನಿಗೆ ನಿಂತಿದ್ದಾರೆ. ಅವರು ನನ್ನಲ್ಲಿ ಅತೀವ ಆತ್ಮವಿಶ್ವಾಸ ತುಂಬಿದ್ದಾರೆ. ಇದು ಉತ್ತಮ ಪ್ರದರ್ಶನ ನೀಡಲು ನೆರವಾಗಿದೆ' ಎಂದು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.