ಕೋಚ್ ಪಾಂಟಿಂಗ್ ಮಾತುಗಳು ಡೆಲ್ಲಿ ತಂಡದ ಮನೋಬಲ ವೃದ್ಧಿಸಲು ಕಾರಣ: ಅಕ್ಷರ್ ಮುಂಬೈ: ಐಪಿಎಲ್ 2022ರ ಆರಂಭಿಕ ಪಂದ್ಯಗಳಲ್ಲಿ ಸಾಧಾರಣ ಪ್ರದರ್ಶನದ ಬಳಿಕ ಪುಟಿದೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್, ಬುಧವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಒಂಬತ್ತು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಕೆಲವು ಆಟಗಾರರಲ್ಲಿ ಕೋವಿಡ್ ಕಾಣಿಸಿಕೊಂಡಿರುವುದು ತಂಡದ ಸಿದ್ಧತೆಗೆ ಹಿನ್ನಡೆಯಾಗಿ ಪರಿಣಮಿಸಿತ್ತು. ಆಟಗಾರರು ದೈಹಿಕ ಹಾಗೂ ಮಾನಸಿಕವಾಗಿಯೂ ಸವಾಲು ಎದುರಿಸಿದ್ದರು. ಇದನ್ನೂ ಓದಿ:ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಅಕ್ಷರ್ ಜೊತೆ ಹಂಚಿ ಹೃದಯ ಗೆದ್ದ ಕುಲ್‌ದೀಪ್ ಆದರೆ ಕೋಚ್ ರಿಕಿ ಪಾಂಟಿಂಗ್ ಅವರ ಉತ್ತೇಜನಕಾರಿ ಮಾತುಗಳು ತಂಡದ ಆತ್ಮವಿಶ್ವಾಸ ಇಮ್ಮಡಿಗೊಳಿಸಿತ್ತು ಎಂದು ಆಲ್‌ರೌಂಡರ್ ಅಕ್ಷರ್ ಪಟೇಲ್ ತಿಳಿಸಿದ್ದಾರೆ. ಕ್ವಾರಂಟೈನ್‌ಗೆ ಒಳಗಾದ ನಾವು ಎರಡು-ಮೂರು ದಿನಗಳ ಬಳಿಕ ಅಭ್ಯಾಸವನ್ನು ಆರಂಭಿಸಿದೆವು. ನಮ್ಮ ಮುಂದೆ ಎರಡು ಆಯ್ಕೆಗಳಿವೆ ಎಂಬುದನ್ನು ಪಾಂಟಿಂಗ್ ಹೇಳಿದರು. ನಾವು ಈ ಪಂದ್ಯವನ್ನು ಆಡಬೇಕಿದೆ. ಆದರೆ ತಂಡದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದು, ಸಿದ್ಧತೆಯನ್ನು ನಡೆಸಿಲ್ಲ ಎಂದು ಭಾವಿಸಬಹುದು. ಇದು ಅಲ್ಲದಿದ್ದರೆ ನಮ್ಮ ಹತೋಟಿಯಲ್ಲಿಲ್ಲದ ವಿಷಯಗಳ ಬಗ್ಗೆ ಚಿಂತಿಸಬಹುದು. ಆದರೆ ನಮ್ಮ ಪ್ರಯತ್ನ ಹಾಗೂ ಸಿದ್ಧತೆಗೆ ಸಂಬಂಧಿಸಿದಂತೆ ಬದ್ಧತೆಯನ್ನು ತೋರಿಸಬೇಕಿದೆ ಎಂದು ಪಾಂಟಿಂಗ್ ಮನದಟ್ಟು ಮಾಡಿರುವುದಾಗಿ ಅಕ್ಷರ್ ವಿವರಿಸಿದರು. ನಾವು ನಮ್ಮ ಆಟದ ಕಡೆ ಮಾತ್ರ ಗಮನ ಹರಿಸಿದೆವು. ಅದಕ್ಕೆ ಅನುಗುಣವಾಗಿ ಯೋಜನೆಯನ್ನು ರೂಪಿಸಿದ್ದೆವು. ಪಾಂಟಿಂಗ್ ಹೇಳಿರುವ ಮಾತುಗಳು ನಮ್ಮ ಮನಸ್ಥಿತಿಯನ್ನು ತೋರಿಸಿತ್ತು ಎಂದು ಹೇಳಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ಡೆಲ್ಲಿ ತಂಡದಲ್ಲಿ ಆರನೇ ಕೋವಿಡ್ ಪ್ರಕರಣ ದಾಖಲಾಗಿತ್ತು. ಟಿಮ್ ಸೀಫರ್ಟ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಉಳಿದೆಲ್ಲ ಆಟಗಾರರಿಗೆ ನಡೆಸಿದ ಎರಡು ಸುತ್ತಿನ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ಕಾರಣ ಡೆಲ್ಲಿ ತಂಡವು ಮೈದಾನಕ್ಕಿಳಿಯಲು ಸಾಧ್ಯವಾಯಿತು. ಬಳಿಕ ಪಂಜಾಬ್ ತಂಡವನ್ನು 115 ರನ್ನಿಗೆ ಕಟ್ಟಿ ಹಾಕಿದ ರಿಷಭ್ ಪಂತ್ ಬಳಗವು, ಕೇವಲ 10.3 ಓವರ್‌ಗಳಲ್ಲಿ ಗುರಿ ಬೆನ್ನತ್ತಿ ಗೆಲುವಿನ ನಗೆ ಬೀರಿತು. ನಾಲ್ಕು ಓವರ್‌ಗಳಲ್ಲಿ ಕೇವಲ 10 ರನ್ ನೀಡಿದ್ದ ಅಕ್ಷರ್, ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಜಿತೇಶ್ ಕುಮಾರ್ ವಿಕೆಟ್‌ಗಳನ್ನು ಕಬಳಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.