ಚೆನ್ನೈ-ಮುಂಬೈ ಹಣಾಹಣಿ ಭಾರತ-ಪಾಕ್ ಪಂದ್ಯದಂತೆ ಭಾಸವಾಗುತ್ತಿದೆ: ಹರಭಜನ್ ನವಿ ಮುಂಬೈ: ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯವು ಭಾರತ ಮತ್ತು ಪಾಕಿಸ್ತಾನದ ನಡುವಣ ಹಣಾಹಣಿಯಂತೆ ಭಾಸವಾಗುತ್ತಿದೆ ಎಂದು ಮಾಜಿ ಕ್ರಿಕೆಟಿಗ ಹರಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಪ್ರತಿ ಸಲವೂ ಚೆನ್ನೈ ಹಾಗೂ ಮುಂಬೈ ನಡುವಣ ಪಂದ್ಯವು ಅಭಿಮಾನಿಗಳಲ್ಲಿ ರೋಚಕತೆಗೆ ಸಾಕ್ಷಿಯಾಗಿದೆ. ಇದನ್ನೂ ಓದಿ:ಅರ್ಜುನ್ ಯಾರ್ಕರ್‌ಗೆ ವಿಕೆಟ್ ಛಿದ್ರ; ಸಚಿನ್ ಪುತ್ರ ಐಪಿಎಲ್ ಆಡಲು ರೆಡಿ? ಐಪಿಎಲ್ ವೃತ್ತಿ ಜೀವನದಲ್ಲಿಹರಭಜನ್ ಸಿಂಗ್, ಮುಂಬೈ ಹಾಗೂ ಚೆನ್ನೈ ತಂಡದ ಪರ ಆಡಿದ್ದಾರೆ. 2008ರಿಂದ 2017ರ ವರೆಗೆ ಮುಂಬೈ ತಂಡದ ಅವಿಭಾಜ್ಯ ಅಂಗವಾಗಿದ್ದ ಹರಭಜನ್ 2018ರಲ್ಲಿ ಚೆನ್ನೈ ತಂಡದೊಂದಿಗೆ ಡ್ರೆಸ್ಸಿಂಗ್ ಕೋಣೆ ಹಂಚಿಕೊಂಡಿದ್ದರು. 'ಮುಂಬೈ ಡ್ರೆಸ್ಸಿಂಗ್ ರೂಮ್‌ನಲ್ಲಿ 10 ವರ್ಷಗಳ ಕಾಲ ಇದ್ದ ನಾನು ಮೊದಲ ಬಾರಿಗೆ ಸಿಎಸ್‌ಕೆ ಜೆರ್ಸಿ ಧರಿಸಿದಾಗ ವಿಚಿತ್ರವೆನಿಸಿತು. ಎರಡು ತಂಡಗಳ ನಡುವಣ ಪೈಪೋಟಿ ಹಾಗೂ ಸ್ಪರ್ಧೆಯ ಮಟ್ಟವು ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಭಾವನೆಯನ್ನು ನೀಡುತ್ತದೆ' ಎಂದು ಹರಭಜನ್ ಹೇಳಿದ್ದಾರೆ. 'ಮುಂಬೈ ವಿರುದ್ಧ ನಾನು ಮೊದಲ ಬಾರಿಗೆ ಮೈದಾನಕ್ಕಿಳಿದಾಗ ಹೆಚ್ಚಿನ ಒತ್ತಡ ಹಾಗೂ ಭಾವನಾತ್ಮಕ ಅಂಶ ಒಳಗೊಂಡಿದ್ದರಿಂದ ಪಂದ್ಯ ಬೇಗನೇ ಮುಗಿಯಲಿ ಎಂದು ಪ್ರಾರ್ಥಿಸಿದ್ದೆ. ಅದೃಷ್ಟವಶಾತ್ ಆ ಪಂದ್ಯ ಬೇಗನೇ ಕೊನೆಗೊಂಡಿತ್ತು. ಚೆನ್ನೈ ತಂಡವು ಪಂದ್ಯವನ್ನು ಗೆದ್ದಿತ್ತು' ಎಂದು ಹರಭಜನ್ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.