2022: ವಿರಾಟ್, ಬಟ್ಲರ್ ಮೇಲೆ ಕಣ್ಣು ಪುಣೆ: ಮೋಹಕ ಹೊಡೆತಗಳ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಸ್ಫೋಟಕ ಆಟಗಾರ ಜೋಸ್ ಬಟ್ಲರ್ ಅವರು ಮಂಗಳವಾರ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಎಲ್ಲರ ಗಮನ ಸೆಳೆಯಲಿದ್ದಾರೆ. ಮಹಾರಾಷ್ಟ್ರ ರಾಜ್ಯ ಕ್ರಿಕೆಟ್ ಸಂಸ್ಥೆ ಅಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ವಿಭಿನ್ನ ಕಾರಣಗಳಿಂದ ಇವರಿಬ್ಬರ ಮೇಲೆ ಕ್ರಿಕೆಟ್ ಪ್ರಿಯರು ನೋಟವಿಡಲಿದ್ದಾರೆ. ಬಟ್ಲರ್ ಅಮೋಘ ಫಾರ್ಮ್‌ನಲ್ಲಿದ್ದು ವಿರಾಟ್ ಕೊಹ್ಲಿ ಈ ಬಾರಿ ನೀರಸ ಆಟವಾಡುತ್ತಿದ್ದಾರೆ. ಹೀಗಾಗಿ ವಿರಾಟ್ ಚೇತರಿಸಿಕೊಳ್ಳದಂತೆ ಮಾಡಲು ರಾಜಸ್ಥಾನ ತಂಡ, ಬಟ್ಲರ್ ಅವರನ್ನು ನಿಯಂತ್ರಿಸಲು ಆರ್‌ಸಿಬಿ ಬೌಲರ್‌ಗಳು ಪ್ರಯತ್ನಿಸಲಿದ್ದಾರೆ. ಈ ಸವಾಲನ್ನು ಇಬ್ಬರು ಬ್ಯಾಟರ್‌ಗಳು ಹೇಗೆ ನಿಭಾಯಿಸುವರು ಎಂಬುದು ಕುತೂಹಲದ ವಿಷಯ. ಸನ್‌ರೈಸರ್ಸ್ ಹೈದರಾಬಾದ್ ಎದುರು 63 ರನ್‌ಗಳ ಸೋಲುಂಡಿರುವ ಆರ್‌ಸಿಬಿ ಜಯದ ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದೆ. ಇದಕ್ಕೆ ವಿರಾಟ್ ಸೇರಿದಂತೆ ಪ್ರಮುಖ ಬ್ಯಾಟರ್‌ಗಳು ಫಾರ್ಮ್ ಕಂಡುಕೊಳ್ಳುವ ಅಗತ್ಯವಿದೆ. ರಾಜಸ್ಥಾನ ರಾಯಲ್ಸ್ ತಂಡ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯ ಗಳಿಸಿ ಭರವಸೆಯಲ್ಲಿದೆ. ನಾಯಕ ಫಫ್ ಡು‍ಪ್ಲೆಸಿ, ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್‌, ದಿನೇಶ್ ಕಾರ್ತಿಕ್ ಮತ್ತು ಶಹಬಾಜ್ ಅಹಮ್ಮದ್ ಅವರ ಬಲವೂ ಬೆಂಗಳೂರು ತಂಡಕ್ಕಿದೆ. ತಂಡದ ಪರವಾಗಿ ಈ ಬಾರಿ ಅತಿ ಹೆಚ್ಚು ರನ್‌ ಗಳಿಸಿರುವ ಡುಪ್ಲೆಸಿ ಈ ವರೆಗೆ ಸಿಹಿ ಮತ್ತು ಕಹಿ ಅನುಭವಿಸಿದ್ದಾರೆ. ದಿನೇಶ್ ಕಾರ್ತಿಕ್ ಅವರು ಉತ್ತಮ ಫಿನಿಶರ್ ಅಗಿ ಹೊರಹೊಮ್ಮಿದ್ದಾರೆ. ವೇಗಿಗಳಾದ ಟ್ರೆಂಟ್ ಬೌಲ್ಟ್‌, ಪ್ರಸಿದ್ಧ ಕೃಷ್ಣ, ಸ್ಪಿನ್‌ ದ್ವಯರಾದ ರವಿಚಂದ್ರನ್ ಅಶ್ವಿನ್ ಮತ್ತು ಯಜುವೇಂದ್ರ ಚಾಹಲ್ ಅವರನ್ನು ಈ ಬ್ಯಾಟರ್‌ಗಳು ಹೇಗೆ ಎದುರಿಸುತ್ತಾರೆ ಎಂಬುದು ಗಮನಾರ್ಹ ಅಂಶ. ಶತಕಗಳ ವೀರ ಬಟ್ಲರ್‌ ಮೂರು ಶತಕಗಳನ್ನು ಸಿಡಿಸಿರುವ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಅವರು ರಾಜಸ್ಥಾನ ಬ್ಯಾಟಿಂಗ್ ವಿಭಾಗದ ಬೆನ್ನೆಲುಬು ಆಗಿದ್ದಾರೆ. ಅವರಿಗೆ ದೇವದತ್ತ ಪಡಿಕ್ಕಲ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಅವರ ಬೆಂಬಲವಿದೆ. ಮಧ್ಯಮ ಕ್ರಮಾಂಕದಲ್ಲಿ ತಂಡದ ಕೈ ಹಿಡಿಯಲು ಶಿಮ್ರೊನ್ ಹೆಟ್ಮೆಯರ್ ಇದ್ದಾರೆ. ಕರುಣ್ ನಾಯರ್ ಮತ್ತು ರಿಯಾನ್ ಪರಾಗ್ ಅವರಿಗೆ ಈ ವರೆಗೆ ಮಿಂಚಲು ಆಗಲಿಲ್ಲ. ಹರ್ಷಲ್ ಪಟೇಲ್‌ಗೆ ಮೊಹಮ್ಮದ್ ಸಿರಾಜ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರಿಂದ ಪೂರಕ ಬೆಂಬಲ ಸಿಕ್ಕಿದರೆ ರಾಜಸ್ಥಾನ ಬ್ಯಾಟರ್‌ಗಳನ್ನು ನಿಯಂತ್ರಿಸಲು ಬೆಂಗಳೂರಿಗೆ ಸಾಧ್ಯ. ತಂಡದ ವನಿಂದು ಹಸರಂಗ ಅವರಿಂದ ಉತ್ತಮ ಸಾಧನೆ ನಿರೀಕ್ಷಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.