ಅಂಬಟಿ ರಾಯುಡು ಆಟ ವ್ಯರ್ಥ: ಮಯಂಕ್ ಪಡೆಗೆ ಮಣಿದ ಚೆನ್ನೈ ಮುಂಬೈ: ಮಧ್ಯಮ ಕ್ರಮಾಂಕದ ಅಂಬಟಿ ರಾಯುಡು ಭರ್ಜರಿ ಬ್ಯಾಟಿಂಗ್ ಮೂಲಕ ಭರವಸೆ ಮೂಡಿಸಿದರೂ ‘ಫಿನಿಶರ್’ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಎಡವಿದರು. ಹೀಗಾಗಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಮಣಿಯಿತು. ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಮಯಂಕ್ ಅಗರವಾಲ್ ನಾಯಕತ್ವದ ಪಂಜಾಬ್ 11 ರನ್‌ಗಳಿಂದ ಜಯ ಗಳಿಸಿತು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಜಿಗಿಯಿತು. 8 ಪಂದ್ಯಗಳಲ್ಲಿ ಆರನೇ ಸೋಲು ಕಂಡ ರವೀಂದ್ರ ಜಡೇಜ ನೇತೃತ್ವದ ಚೆನ್ನೈ ಏಳನೇ ಸ್ಥಾನದಲ್ಲೇ ಉಳಿಯಿತು. 188 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಚೆನ್ನೈನ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕವಾಡ್ ಅವರನ್ನು ಹೊರತುಪಡಿಸಿದರೆ ಅಗ್ರ ಕ್ರಮಾಂಕದ ಮೂವರು ಒಂದಂಕಿ ಮೊತ್ತ ಗಳಿಸಿ ವಾಪಸಾದರು. ತಂಡ 40 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಬಂದ ಅಂಬಟಿ ರಾಯುಡು ಭರ್ಜರಿ ಆರು ಸಿಕ್ಸರ್ ಮತ್ತು ಏಳು ಬೌಂಡರಿಗಳೊಂದಿಗೆ ಮಿಂಚಿ ಭರವಸೆ ಮೂಡಿಸಿದರು. ಋತುರಾಜ್ ಔಟಾದ ನಂತರ ರವೀಂದ್ರ ಜಡೇಜ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಕೊನೆಯ ಓವರ್‌ಗಳಲ್ಲಿ ಒತ್ತಡ ಹೇರುವಲ್ಲಿ ಪಂಜಾಬ್ ಬೌಲರ್‌ಗಳುಯಶಸ್ವಿಯಾದರು. ರಿಷಿ ಧವನ್‌ ಹಾಕಿದ ಕೊನೆಯ ಓವರ್‌ನಲ್ಲಿ ಚೆನ್ನೈ ಗೆಲುವಿಗೆ 27 ರನ್‌ಗಳು ಬೇಕಾಗಿದ್ದವು. ಕ್ರೀಸ್‌ನಲ್ಲಿ ಧೋನಿ ಇದ್ದ ಕಾರಣ ನಿರೀಕ್ಷೆ ಗರಿಗೆದರಿತ್ತು. ಮೊದಲ ಎಸೆತದಲ್ಲಿ ಧೋನಿ ಬ್ಯಾಟಿನಿಂದ ಸಿಕ್ಸರ್ ಸಿಡಿದಾಗ ಚೆನ್ನೈ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ನಂತರ ರಿಷಿ ಮೇಲುಗೈ ಸಾಧಿಸಿದರು. ಮೂರನೇ ಎಸೆತದಲ್ಲಿ ಧೋನಿ ವಿಕೆಟ್ ಉರುಳಿಸಿ ಅವರು ತಂಡದ ಜಯ ಖಚಿತಪಡಿಸಿದರು. ಐದನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿ ರವೀಂದ್ರ ಜಡೇಜ ಸೋಲಿನ ಅಂತರ ಕಡಿಮೆ ಮಾಡಿದರು. ಶಿಖರ್ ಧವನ್ ಅರ್ಧಶತಕ ಟಾಸ್ ಗೆದ್ದ ಚೆನ್ನೈ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಶಿಖರ್ ಧವನ್ (88; 59 ಎಸೆತ, 9 ಬೌಂಡರಿ, 2 ಸಿಕ್ಸರ್) ಮತ್ತು ಭಾನುಕ ರಾಜಪಕ್ಸ (42; 32 ಎ, 2 ಬೌಂ, 2 ಸಿ) ಅವರ ಅಮೋಘ ಜೊತೆಯಾಟದ ನೆರವಿನಿಂದ ಪಂಜಾಬ್ ಕಿಂಗ್ಸ್ 4 ವಿಕೆಟ್‌ ಕಳೆದುಕೊಂಡು 187 ರನ್ ಗಳಿಸಿತು. ಶಿಖರ್ ಜೊತೆ ಇನಿಂಗ್ಸ್ ಆರಂಭಿಸಿದ ನಾಯಕ ಮಯಂಕ್ ಅಗರವಾಲ್ 37 ರನ್ ಜೋಡಿಸಿದರು. ಆದರೆ ಶ್ರೀಲಂಕಾದ ಬೌಲರ್ ಮಹೀಶ್ ತೀಕ್ಷಣ ಆರನೇ ಒವರ್‌ನಲ್ಲಿ ಪೆಟ್ಟು ನೀಡಿದರು. ಕೇರಂ ಬಾಲ್‌ ಎಸೆತವನ್ನು ಫ್ರಂಟ್ ಫೂಟ್‌ನಲ್ಲಿ ಕಟ್ ಮಾಡಲು ಪ್ರಯತ್ನಿಸಿದ ಮಯಂಕ್ ಎಡವಿದರು. ಚೆಂಡು ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿದ್ದ ಶಿವಂ ದುಬೆ ಅವರ ಕೈ ಸೇರಿತು. ನಂತರ ಶಿಖರ್ ಮತ್ತು ರಾಜಪಕ್ಸ ಅವರ ಆಟ ರಂಗೇರಿತು. ಇಬ್ಬರೂ 110 ರನ್‌ಗಳ ಜೊತೆಯಾಟ ಆಡಿದರು. 18ನೇ ಓವರ್ ವರೆಗೆ ಅವರ ಆಟ ಮುಂದುವರಿಯಿತು. ಅರ್ಧಶತಕದತ್ತ ಹೆಜ್ಜೆ ಹಾಕಿದ್ದ ರಾಜಪಕ್ಸ ಅವರನ್ನು ಡ್ವೇನ್ ಬ್ರಾವೊ ವಾಪಸ್ ಕಳುಹಿಸಿದರು. ಅಷ್ಟರಲ್ಲಿ ಅರ್ಧಶತಕ ದಾಖಲಿಸಿದ್ದ ಶಿಖರ್ ಧವನ್ ಮತ್ತೆಯೂ ಬ್ಯಾಟಿಂಗ್ ವೈಭವ ಮುಂದುವರಿಸಿದರು. ಲಿಯಾಮ್ ಲಿವಿಂಗ್‌ಸ್ಟೋನ್ ಸ್ಫೋಟಕ ಬ್ಯಾಟಿಂಗ್ ಮೂಲಕ ರನ್ ಗತಿ ಹೆಚ್ಚಿಸಿದರು. ಶಿಖರ್ ಔಟಾಗದೆ ಉಳಿದರು. ಚೆನ್ನೈ ಸೂಪರ್ ಕಿಂಗ್ಸ್ ಹಿಂದಿನ ಪಂದ್ಯದಲ್ಲಿ ಆಡಿದ ತಂಡವನ್ನೇ ಈ ಪಂದ್ಯದಲ್ಲೂ ಕಣಕ್ಕೆ ಇಳಿಸಿತ್ತು. ಪಂಜಾಬ್ ಮೂರು ಬದಲಾವಣೆಗಳೊಂದಿಗೆ ಆಡಿತ್ತು. ಶಾರೂಖ್ ಖಾನ್‌, ನೇಥನ್ ಎಲಿಸ್ ಮತ್ತು ವೈಭವ್ ಅರೋರ ಬದಲಿಗೆ ರಿಷಿ ಧವನ್‌, ಭಾನುಕ ರಾಜಪಕ್ಸ ಮತ್ತು ಸಂದೀಪ್ ಶರ್ಮಾ ಅವರಿಗೆ ಅವಕಾಶ ನೀಡಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.