ಲಯಕ್ಕೆ ಮರಳಿದ ಪೂಜಾರ; ತಂದೆಗೆ ಸಂತಸ ನವದೆಹಲಿ (ಪಿಟಿಐ): ಸುಮಾರು ಒಂದೂವರೆ ವರ್ಷ ರನ್‌ಗಳ ಬರ ಎದುರಿಸಿದ್ದ ಚೇತೇಶ್ವರ್ ಪೂಜಾರ ಭಾರತ ತಂಡದಿಂದ ಸ್ಥಾನ ಕೂಡ ಕಳೆದುಕೊಂಡಿದ್ದರು. ಆದರೆ ಇಂಗ್ಲಿಷ್ ಕೌಂಟಿಯಲ್ಲಿ ಆಡಿ ತಮ್ಮ ಲಯ ಕಂಡುಕೊಂಡಿದ್ದಾರೆ. ಕೌಂಟಿಯಲ್ಲಿ ಸಸಕ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಪೂಜಾರ ಎರಡು ದ್ವಿಶತಕ ಗಳಿಸಿದ್ದಾರೆ. ಅವರ ಬಾಲ್ಯದ ಕೋಚ್ ಕೂಡ ಆಗಿರುವ ತಂದೆ ಅರವಿಂದ್ ಪೂಜಾರ ತಮ್ಮ ಮಗ ಲಯಕ್ಕೆ ಮರಳಿರುವುದರಿಂದ ಸಂತಸಗೊಂಡಿದ್ದಾರೆ. ‘ಕಳೆದ ಮೂರು ಋತುಗಳಲ್ಲಿ ನಿರಂತರವಾಗಿ ಪಂದ್ಯಗಳು ನಡೆದಿರಲಿಲ್ಲ. ಆದ್ದರಿಂದ ಪೂಜಾರ ಬ್ಯಾಟಿಂಗ್‌ನಲ್ಲಿ ಫಾರ್ಮ್‌ನಲ್ಲಿರಲಿಲ್ಲ. ಈಗ ಅವರು ಮತ್ತೆ ಲಯಕ್ಕೆ ಮರಳಿದ್ಧಾರೆ. ಕೊರೊನಾದಿಂದಾಗಿ ರಣಜಿ ಟೂರ್ನಿ ಸೇರಿದಂತೆ ಕೆಲವು ದೇಶಿ ಟೂರ್ನಿಗಳು ನಡೆದಿರಲಿಲ್ಲ. ಅಂತರರಾಷ್ಟ್ರೀಯ ಪಂದ್ಯಗಳು ಕಡಿಮೆಯಾಗಿದ್ದವು’ ಎಂದು ಅರವಿಂದ್ ಅಭಿಪ್ರಾಯಪಟ್ಟಿದ್ಧಾರೆ. ’ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ತಂಡಗಳ ವಿರುದ್ಧ ಆಡುವಾಗ ಉತ್ಕೃಷ್ಟ ಫಾರ್ಮ್‌ನಲ್ಲಿರುವುದು ಮುಖ್ಯ. ದೇಶಿ ಕ್ರಿಕೆಟ್‌ನಲ್ಲಿಯ ಬೌಲಿಂಗ್‌ಗೂ ಮತ್ತು ಅಂತರರಾಷ್ಟ್ರೀಯ ಮಟ್ಟದ ಬೌಲಿಂಗ್‌ಗೂ ವ್ಯತ್ಯಾಸವಿರುತ್ತದೆ’ ಎಂದು ಹೇಳಿದ್ಧಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.