2022: ಕಿಂಗ್ಸ್ ವಿರುದ್ಧ ರಾಯಲ್ಸ್‌ಗೆ ಜಯದ ‘ಯಶಸ್ಸು’ ಮುಂಬೈ: ಸವಾಲಿನ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಜಯ ಸಾಧಿಸಿತು. ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ತಂಡ ಮಯಂಕ್ ಅಗರವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಎದುರು ಆರು ವಿಕೆಟ್‌ಗಳಿಂದ ಜಯ ಗಳಿಸಿತು. ಮೂರು ವಿಕೆಟ್ ಉರುಳಿಸಿದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಮತ್ತು ಅಮೋಘ ಬ್ಯಾಟಿಂಗ್ ಮಾಡಿದ ಯಶಸ್ವಿ ಜೈಸ್ವಾಲ್ ಜಯದ ರೂವಾರಿಗಳಾದರು. ಜಾನಿ ಬೇಸ್ಟೊ ಅವರ ಅರ್ಧಶತಕ ಮತ್ತು ಜಿತೇಶ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ 5ಕ್ಕೆ 189 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ರಾಜಸ್ಥಾನ ಇನ್ನೂ ಎರಡು ಎಸೆತ ಉಳಿದಿರುವಾಗ ದಡ ಸೇರಿತು. ಯಶಸ್ವಿ ‘ಪುನರಾಗಮನ’ದಲ್ಲಿ ಮಿಂಚಿ ಜೀವನಶ್ರೇಷ್ಠ ಮೊತ್ತ ಗಳಿಸಿದರು. ಈ ಆವೃತ್ತಿಯಲ್ಲಿ ರಾಜಸ್ಥಾನ ಗುರಿ ಬೆನ್ನತ್ತಿ ಗೆದ್ದ ಮೊದಲ ಪಂದ್ಯ ಇದು. ಕರುಣ್ ನಾಯರ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದುಕೊಂಡ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ ಜೋಸ್ ಬಟ್ಲರ್ ಜೊತೆ 46 ರನ್ ಸೇರಿಸಿದರು. ಈ ಆವೃತ್ತಿಯಲ್ಲಿ ಮೂರು ಶತಕಗಳನ್ನು ಗಳಿಸಿರುವ ಜೋಸ್ ಬಟ್ಲರ್ ಆರಂಭದಲ್ಲೇ ಬೌಂಡರಿಗಳ ಮೂಲಕ ಮಿಂಚಿದರು. ಆದರೆ 4ನೇ ಓವರ್‌ನ ಕೊನೆಯ ಎಸೆತವನ್ನು ಸ್ಕೂಪ್‌ ಮಾಡಲು ಪ್ರಯತ್ನಿಸಿ ಶಾರ್ಟ್‌ ಥರ್ಡ್‌ಮ್ಯಾನ್‌ನಲ್ಲಿದ್ದ ರಬಾಡಗೆ ಕ್ಯಾಚ್ ನೀಡಿದರು. ನಂತರ ಸಂಜು ಸ್ಯಾಮ್ಸನ್‌ ಮತ್ತು ದೇವದತ್ತ ಪಡಿಕ್ಕಲ್ ಜೊತೆಗೂಡಿ ಯಶಸ್ವಿ ಜೈಸ್ವಾಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ರಿವರ್ಸ್ ಸ್ವೀಪ್‌, ಸ್ಕೂಪ್ ಮತ್ತು ಡ್ರೈವ್‌ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಕೊನೆಯ ಓವರ್‌ಗಳಲ್ಲಿ ಶಿಮ್ರೊನ್ ಹೆಟ್ಮೆಯರ್ ಭರವಸೆಯಿಂದ ಆಡಿ ಜಯ ತಂದುಕೊಟ್ಟರು. ಸೋಲಿನೊಂದಿಗೆ ಪಂಜಾಬ್ ತಂಡದ ಪ್ಲೇ ಆಫ್ ಹಾದಿ ಕಠಿಣವಾಗಿದೆ. ಬೇಸ್ಟೊ, ಜಿತೇಶ್ ಸೊಬಗಿನ ಆಟ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಪರವಾಗಿ ಆರಂಭಿಕ ಬ್ಯಾಟರ್ ಜಾನಿ ಬೇಸ್ಟೊ ಮತ್ತು ಐದನೇ ಕ್ರಮಾಂಕದ ಜಿತೇಶ್ ಶರ್ಮಾ ಉತ್ತಮ ಆಟವಾಡಿದರು. 15ನೇ ಓವರ್‌ನಲ್ಲಿ ಮಯಂಕ್ ಅಗರವಾಲ್ ಮತ್ತು ಜಾನಿ ಬೇಸ್ಟೊ ವಿಕೆಟ್ ಉರುಳಿಸಿದ ಯಜುವೇಂದ್ರ ಚಾಹಲ್ ತಂಡದ ರನ್ ಗಳಿಕೆಗೆ ತಡೆ ಹಾಕಿದರು. ಭಾನುಕ ರಾಜಪಕ್ಸೆ ಕೂಡ ಚಾಹಲ್‌ಗೆ ವಿಕೆಟ್ ಒಪ್ಪಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.