ತಂಡದಲ್ಲಿ ಗೆಲುವಿನ ಹಸಿವಿದೆ, ಪಂದ್ಯ ಬಿಟ್ಟುಕೊಡುವ ಮಾತೇ ಇಲ್ಲ: ಡೇವಿಡ್ ವಾರ್ನರ್ ಮುಂಬೈ: ಸೋತು ಶರಣಾಗುವ ಮನಸ್ಥಿತಿ ತಮ್ಮ ತಂಡದ ಯಾರೊಬ್ಬರಲ್ಲೂ ಇಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆರಂಭಿಕ ಬ್ಯಾಟರ್‌ ಡೇವಿಡ್‌ ವಾರ್ನರ್ ಹೇಳಿದ್ದಾರೆ. ಇಲ್ಲಿನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೆಣಸಾಟ ನಡೆಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಪರ ಇನಿಂಗ್ಸ್‌ ಆರಂಭಿಸಿದ ಡೇವಿಡ್‌ ವಾರ್ನರ್‌ ಮೊದಲ ಎಸೆತದಲ್ಲಿಯೇ ಔಟಾಗಿದ್ದರು. ಅದರ ಹೊರತಾಗಿಯೂ ಡೆಲ್ಲಿ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 159 ರನ್‌ ಗಳಿಸಿತ್ತು.ಮಿಚೇಲ್‌ ಮಾರ್ಶ್‌ (63) ಅರ್ಧಶತಕ ಗಳಿಸಿ ಮಿಂಚಿದ್ದರು. ಈ ಗುರಿ ಬೆನ್ನತ್ತಿದ ಪಂಜಾಬ್‌ ಬಳಗದ ಬ್ಯಾಟರ್‌ಗಳು ಡೆಲ್ಲಿ ಪಡೆಯ ಪರಿಣಾಮಕಾರಿ ಬೌಲಿಂಗ್‌ ದಾಳಿ ಎದುರು ಮಂಕಾದರು. ಜಿತೇಶ್‌ ಶರ್ಮಾ (44), ಜಾನಿ ಬೆಸ್ಟೊ (28) ಹಾಗೂರಾಹುಲ್ ಚಾಹರ್ (ಅಜೇಯ 25) ಅಲ್ಪ ಪ್ರತಿರೋಧ ತೋರಿದರಾದರೂ ಪಂದ್ಯ ಗೆದ್ದು ಕೊಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 142 ರನ್‌ ಗಳಿಸಲಷ್ಟೇ ಶಕ್ತವಾಗಿ 17 ರನ್‌ ಅಂತರದ ಸೋಲೊಪ್ಪಿಕೊಂಡಿತ್ತು. ಇದನ್ನೂ ಓದಿ: 2022 | : ಹೈದರಾಬಾದ್ ವಿರುದ್ಧ ಬೌಲಿಂಗ್ ಆಯ್ದುಕೊಂಡ ಮುಂಬೈ ಪಂದ್ಯದ ಬಳಿಕ ಮಾತನಾಡಿದ ವಾರ್ನರ್‌, 'ನಮ್ಮ ತಂಡದ ಯಾರೊಬ್ಬರಲ್ಲಿಯೂ ಶರಣಾಗತಿಯ ಮನಸ್ಥಿತಿ ಇಲ್ಲ. ಬೌಲಿಂಗ್‌ನಲ್ಲಿ ಆಗಲಿ ಅಥವಾ ಬ್ಯಾಟಿಂಗ್‌ನಲ್ಲೇ ಆಗಲಿ, ನಾವು ಹೋರಾಟ ಮಾಡುತ್ತೇವೆ. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅತ್ಯುತ್ತಮ ಆಟವಾಡುತ್ತೇವೆ. ನಮ್ಮಲ್ಲಿ ಗೆಲುವಿನ ಹಸಿವಿದೆ. ಒಬ್ಬರಿಗೊಬ್ಬರು ನೆರವಾಗುವ ಹಂಬಲವಿದೆ. ಪರಸ್ಪರರ ಬಗ್ಗೆ ಕಾಳಜಿ ತೋರುತ್ತೇವೆ' ಎಂದುಹೇಳಿದ್ದಾರೆ. ವಾರ್ನರ್‌ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದರೂ, ಫೀಲ್ಡಿಂಗ್‌ನಲ್ಲಿ ತಮ್ಮ ತಂಡಕ್ಕೆ ನೆರವಾಗಿದ್ದರು. ಪಂಜಾಬ್‌ ತಂಡದ ಗೆಲುವಿಗೆ ಇನ್ನು 15 ಎಸೆತಗಳಲ್ಲಿ 37 ರನ್ ಬೇಕಿತ್ತು. ಉತ್ತಮ ಲಯದಲ್ಲಿದ್ದ ಜಿತೇಶ್‌ ಹಾಗೂ ರಾಹುಲ್‌ ಚಾಹರ್‌ ಕ್ರೀಸ್‌ನಲ್ಲಿದ್ದರು. ಸ್ಟ್ರೈಕ್‌ನಲ್ಲಿದ್ದಜಿತೇಶ್‌, ಶಾರ್ದೂಲ್‌ ಎಸೆದ 18ನೇ ಓವರ್‌ನ 4ನೇ ಎಸೆತವನ್ನು ಲಾಂಗ್‌ ಆಫ್‌ನತ್ತ ಬಲವಾಗಿ ಬಾರಿಸಿದರು. ಆದರೆ,ಬೌಂಡರಿ ಗೆರೆ ಬಳಿಯಿಂದ ಓಡಿ ಬಂದ ವಾರ್ನರ್‌ ಕ್ಯಾಚ್‌ ಪಡೆದು, ಜಿತೇಶ್‌ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ಇದು ಪಂದ್ಯಕ್ಕೆ ತಿರುವು ನೀಡಿತು. ಅಮೋಘ ಕ್ಷೇತ್ರರಕ್ಷಣೆ ಕುರಿತು ಮಾನತಾಡಿದ ಅವರು, 'ನನ್ನ ಪ್ರಕಾರ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಕ್ರಿಕೆಟ್‌ನ ಎರಡು ಮುಖಗಳು. ಚೆಂಡು ಬೌಂಡರಿ ದಾಟದಂತೆ ತಡೆಯಲು ಮತ್ತು ಬೌಂಡರಿ ಗೆರೆ ಬಳಿ ಕ್ಯಾಚ್‌ಗಳನ್ನು ಪಡೆಯಲು ನೋಡುತ್ತೇನೆ. ಅದೃಷ್ಟವಶಾತ್‌ ಅಂತಹದೊಂದು ಕ್ಯಾಚ್‌ ಪಡೆದೆ. ಅದರಿಂದಾಗಿ ನಮಗೆ ಉತ್ತಮ ಫಲಿತಾಂಶ ಲಭಿಸಿತು. ನಾನು ಬೌಲರ್‌ಗಳ ಪರವಾಗಿ ರನ್‌ ಗಳಿಕೆಗೆ ತಡೆಯೊಡ್ಡಲು ಬಯಸುತ್ತೇನೆ' ಎಂದಿದ್ದಾರೆ. ../3FcGu0crdw ಈ ಬಾರಿಯ ಐಪಿಎಲ್‌ನಲ್ಲಿ 11 ಪಂದ್ಯಗಳಲ್ಲಿ ಬ್ಯಾಟ್‌ ಬೀಸಿರುವ ವಾರ್ನರ್‌, ಐದು ಅರ್ಧಶತಕ ಸಹಿತ 427 ರನ್‌ ಕಲೆಹಾಕಿದ್ದಾರೆ. ಡೆಲ್ಲಿ ತಂಡ ಟೂರ್ನಿಯಲ್ಲಿ ಆಡಿರುವ 13 ಪಂದ್ಯಗಳಿಂದ 7 ಜಯ ಸಾಧಿಸಿದೆ.14 ಅಂಕಗಳೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಲೀಗ್ ಹಂತದ ತನ್ನ ಕೊನೇ ಪಂದ್ಯದಲ್ಲಿ ಮೇ 21ರಂದು ಮುಂಬೈ ಇಂಡಿಯನ್ಸ್‌ ಸವಾಲು ಎದುರಿಸಲಿದ್ದು, ಪ್ಲೇ–ಆಫ್‌ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇದನ್ನೂ ಓದಿ:ತಿಲಕ್‌ ವರ್ಮಾ ಕುರಿತು ರೋಹಿತ್ ಶರ್ಮಾ ಸರಿಯಾಗಿಯೇ ಹೇಳಿದ್ದಾರೆ: ಸುನಿಲ್ ಗವಾಸ್ಕರ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.