2022: ಗಾಯಾಳು ರಹಾನೆ ಐಪಿಎಲ್‌ನಿಂದ ಔಟ್: ವರದಿ ಮುಂಬೈ: ಗಾಯದ ಸಮಸ್ಯೆಗೆ ಒಳಗಾಗಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಬ್ಯಾಟರ್ ಅಜಿಂಕ್ಯ ರಹಾನೆ, ಐಪಿಎಲ್ ಟೂರ್ನಿಯ ಉಳಿದಿರುವ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ ಎಂದು ವರದಿಯಾಗಿದೆ. 'ಕ್ರಿಕ್‌ಬಜ್' ಮಾಹಿತಿ ಪ್ರಕಾರ, ರಹಾನೆ ಸ್ನಾಯು ಸೆಳೆತದಿಂದ ಬಳಲುತ್ತಿದ್ದು, ಮುಂಬರುವ ಇಂಗ್ಲೆಂಡ್ ಟೂರ್ನಿಗೂ ಅಲಭ್ಯರಾಗುವ ಆತಂಕ ಕಾಡುತ್ತಿದೆ. ಇದನ್ನೂ ಓದಿ: 2022 : ಡೆಲ್ಲಿ ವಿರುದ್ಧ ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ರಹಾನೆ ಗಾಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ಕೆಕೆಆರ್ ಬಯೋಬಬಲ್ ತೊರೆಯಲಿರುವ ರಹಾನೆ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಕೆಕೆಆರ್ ಪರ ಆರಂಭಿಕನಾಗಿ ಬ್ಯಾಟಿಂಗ್ ಮಾಡಿರುವ ರಹಾನೆ, ಏಳು ಪಂದ್ಯಗಳಲ್ಲಿ 133 ರನ್ ಗಳಿಸಿದ್ದರು. ಕೆಕೆಆರ್ 13 ಪಂದ್ಯಗಳಲ್ಲಿ ಆರು ಗೆಲುವಿನೊಂದಿಗೆ ಒಟ್ಟು 12 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಪ್ಲೇ-ಆಫ್ ಪ್ರವೇಶದ ಕನಸು ಜೀವಂತವಾಗಿರಿಸಲು ಕೊನೆಯ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಶ್ರೇಯಸ್ ಅಯ್ಯರ್ ಪಡೆ, ಮೇ 18ರಂದು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.