ಜೀವನದ ಆನಂದದಾಯಕ ಕ್ಷಣದಲ್ಲಿದ್ದೇನೆ: ವಿರಾಟ್ ಕೊಹ್ಲಿ ಮುಂಬೈ: ಬ್ಯಾಟಿಂಗ್ ಲಯ ಕಳೆದುಕೊಂಡಿರುವ ವಿರಾಟ್ ಕೊಹ್ಲಿ ಮೈದಾನದಲ್ಲಿ ಸತತ ವೈಫಲ್ಯ ಅನುಭವಿಸುತ್ತಿರಬಹುದು. ಆದರೆ ಮೈದಾನದ ಹೊರಗಡೆ ಜೀವನದ ಆನಂದಾಯಕ ಕ್ಷಣದಲ್ಲಿದ್ದೇನೆ ಎಂದು ಹೇಳಿದ್ದಾರೆ. ಸ್ಟಾರ್ ಸ್ಪೋರ್ಟ್ಸ್‌ಗೆ ಈ ಕುರಿತು ಪ್ರತಿಕ್ರಿಯಿಸಿರುವ ಕೊಹ್ಲಿ, 'ನಿಜವಾಗಿಯೂ ನನ್ನ ಜೀವನದ ಆನಂದದಾಯಕ ಕ್ಷಣದಲ್ಲಿದ್ದೇನೆ. ಮೈದಾನದಲ್ಲಿ ನಾನು ಮಾಡುವ ಕೆಲಸಕ್ಕೆ ಯಾವುದೇ ಮೌಲ್ಯ ಸಿಗುತ್ತಿಲ್ಲ ಎಂದು ಯೋಚಿಸುವ ಹಂತವನ್ನು ದಾಟಿ ಬಂದಿದ್ದೇನೆ. ಇದು ನನ್ನ ಬೆಳವಣಿಗೆಯ ಹಂತ' ಎಂದು ಹೇಳಿದ್ದಾರೆ. ಇದನ್ನೂ ಓದಿ: 2022 : ಆರ್‌ಸಿಬಿ ವಿರುದ್ಧ ಟಾಸ್ ಗೆದ್ದ ಗುಜರಾತ್ ಬ್ಯಾಟಿಂಗ್ ಐಪಿಎಲ್ 2022ರಲ್ಲಿ ವೈಫಲ್ಯ ಅನುಭವಿಸಿರುವ ಕೊಹ್ಲಿ, 13 ಪಂದ್ಯಗಳಲ್ಲಿ 236 ರನ್ ಮಾತ್ರ ಗಳಿಸಿದ್ದಾರೆ. ಈ ಪೈಕಿ ಮೂರು ಬಾರಿ ಗೋಲ್ಡನ್ ಡಕ್‌ಗೆ ಔಟ್ ಆಗಿದ್ದಾರೆ. ತನ್ನಲ್ಲಿ ಕ್ರಿಕೆಟ್ ಆಡುವ ಪ್ರೇರಣಾ ಶಕ್ತಿ ಕುಂದಿದೆ ಎಂಬುದನ್ನು ಕೊಹ್ಲಿ ನಿರಾಕರಿಸಿದರು. ಆ ದಿನ ಬಂದರೆ ನಾನು ಆಡುವುದನ್ನು ನಿಲ್ಲಿಸುತ್ತೇನೆ ಎಂದು ಹೇಳಿದ್ದಾರೆ. 'ಕೆಲವು ವಿಷಯಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡಿದ್ದೇನೆ. ನಿಯಂತ್ರಿಸಲು ಸಾಧ್ಯವಿರುವ ಅಂಶಗಳತ್ತ ಮಾತ್ರ ಗಮನ ಹರಿಸುತ್ತಿದ್ದೇನೆ. ಮೈದಾನದಲ್ಲಿ ಕಠಿಣ ಪ್ರಯತ್ನ ಮಾಡುತ್ತೇನೆ. ಆ ದೃಷ್ಟಿಕೋನದಿಂದ ನಾನು ಅತ್ಯಂತ ಸಮತೋಲಿತ ಪರಿಸ್ಥಿತಿಯಲ್ಲಿದ್ದೇನೆ. ನಾನು ಯಾರು ಹಾಗೂ ಜೀವನವನ್ನು ಹೇಗೆ ನಡೆಸುತ್ತಿದ್ದೇನೆ ಎಂಬುದರ ಬಗ್ಗೆ ಸಂತೋಷವಾಗಿದ್ದೇನೆ' ಎಂದು ಹೇಳಿದರು. ಮೈದಾನದಲ್ಲಿನ ಯಶಸ್ಸು ಅಥವಾ ವೈಫಲ್ಯ ಅಪ್ರಸ್ತುತ ಎಂದು ಕೊಹ್ಲಿ ವಿವರಿಸಿದರು. ಅಲ್ಲದೆ ಮೈದಾನದಲ್ಲಿನ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.