ಮೈದಾನದಲ್ಲಿ ಎದೆ ಹಿಡಿದುಕೊಂಡು ಕುಸಿದ ಶ್ರೀಲಂಕಾ ಬ್ಯಾಟರ್ ಕುಶಲ್ ಮೆಂಡಿಸ್ ಢಾಕಾ: ಇಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ವೇಳೆ ಶ್ರೀಲಂಕಾ ಕ್ರಿಕೆಟಿಗ ಕುಶಲ್ ಮೆಂಡಿಸ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭೋಜನ ವಿರಾಮಕ್ಕೆ ಮುನ್ನ ಕೊನೆಯ ಓವರ್‌ನಲ್ಲಿ ಮೆಂಡಿಸ್‌ಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಎದೆ ಹಿಡಿದುಕೊಂಡು ಕುಸಿದಿದ್ದಾರೆ. ಕೂಡಲೇ ಅವರನ್ನು ವೈದ್ಯಕೀಯ ಸಿಬ್ಬಂದಿ ಪರೀಕ್ಷಿಸಿದೆ. ಬಳಿಕ, ಎದೆ ಹಿಡಿದುಕೊಂಡೇ ಅವರು ಹೊರಗೆ ತೆರಳಿದ್ದಾರೆ. ಮೆಂಡೀಸ್ ಅವರನ್ನು ಹೆಚ್ಚಿನ ತಪಾಸಣೆಗೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ವೈದ್ಯ ಹೊಸೈನ್ ಚೌಧರಿ ತಿಳಿಸಿದ್ದಾರೆ. ‘ಅವರಿಗೆ ನಿರ್ಜಲೀಕರಣ ಸಮಸ್ಯೆ ಆಗಿರಬಹುದು. ಅದೇ ಅವರ ಅನಾರೋಗ್ಯಕ್ಕೆ ಕಾರಣವಾಗಿರಬಹುದು. ಗ್ಯಾಸ್ಟ್ರೈಟಿಸ್ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ವೈದ್ಯಕೀಯ ಪರೀಕ್ಷೆಗಳು ಮುಗಿದ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟವಾಗಿ ಹೇಳಬಹುದು’ಎಂದು ಅವರು ಹೇಳಿದ್ದಾರೆ. ಕುಶಲ್ ಮೆಂಡಿಸ್ ಸ್ಥಾನಕ್ಕೆ ಕಮಿಂದು ಮೆಂಡಿಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.