ಮುಗಿಬಿದ್ದ ಅಭಿಮಾನಿಗಳು: ತಲೆ ಮೇಲೆ ಕೈ ಇಟ್ಟುಕೊಂಡು ತೆರಳಿದ ರೋಹಿತ್ ಶರ್ಮಾ ಮುಂಬೈ: ಭಾರತ ಪುರುಷರ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಮೈದಾನದಲ್ಲಿ ಅವರನ್ನು ಕಂಡು ಹುಚ್ಚೆದ್ದು ಕುಣಿಯುವ ಅಭಿಮಾನಿಗಳು, ಹೊರಗಡೆ ಕಂಡರೆ ಮುಗಿಬೀಳದೇ ಇರುತ್ತಾರೆಯೇ? ಸೋಮವಾರ ಮುಂಬೈನಲ್ಲಿ ಸಹ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ತಮ್ಮ ಸ್ನೇಹಿತರೊಬ್ಬರ ಭೇಟಿಗೆ ಹೋಟೆಲ್‌ಗೆ ಬಂದಿದ್ದ ರೋಹಿತ್ ಶರ್ಮಾ, ಹೊರಗೆ ತೆರಳುವಾಗ ಭಾರೀ ಪ್ರಮಾಣದ ಅಭಿಮಾನಿಗಳು ಎದುರಾದರು. ತಮ್ಮ ನೆಚ್ಚಿನ ಆಟಗಾರನ ಜೊತೆ ಸೆಲ್ಫಿ, ಆಟೊಗ್ರಾಫ್‌ಗಾಗಿ ಮುಗಿಬಿದ್ದರು. ಹೊರಗಡೆ ತೆರಳಲು ಅವರಿಗೆ ಅವಕಾಶವೇ ಸಿಗಲಿಲ್ಲ. ಈ ಸಂದರ್ಭ ಭದ್ರತಾ ಸಿಬ್ಬಂದಿ ಸುರಕ್ಷತೆ ದೃಷ್ಟಿಯಿಂದ ಹೋಟೆಲ್‌ ಒಳಗಿರುವುದೇ ಕ್ಷೇಮ ಎಂದು ಹೇಳಿ ಕಳುಹಿಸಿದರು. ಈ ವೇಳೆ, ದಾರಿ ಕಾಣದೇ ರೋಹಿತ್ ತಮ್ಮ ಹಣೆ ಮೇಲೆ ಕೈ ಇಟ್ಟುಕೊಂಡು ಒಳಗೆ ಹೋದರು. . ../hUhrS2bT8j ಏಷ್ಯಾ ಕಪ್ ಕ್ರಿಕೆಟ್ ಸರಣಿಗೂ ಮುನ್ನ ವಿಶ್ರಾಂತಿ ಪಡೆಯುತ್ತಿರುವ ರೋಹಿತ್ ಶರ್ಮಾ ಮುಂಬೈನ ಅಭಿಮಾನಿಗಳಿಂದ ಅಕ್ಷರಶಃ ಮುತ್ತಿಗೆಗೆ ಒಳಗಾಗಿದ್ದರು. ಸಾವಿರಾರು ಅಭಿಮಾನಿಗಳನ್ನು ಒಮ್ಮಲೆ ಆಗಮಿಸಿದ್ದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ರೋಹಿತ್ ಅವರನ್ನು ಸುತ್ತುವರಿದು ಕರೆದೊಯ್ದರು. ಐಪಿಎಲ್‌ನ ಮುಂಬೈ ಇಂಡಿಯನ್ಸ್ ತಂಡ ಮತ್ತು ಭಾರತ ಮೂರು ಮಾದರಿಯ ಕ್ರಿಕೆಟ್ ತಂಡಗಳ ನಾಯಕರಾಗಿ ಅವರು ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ–20ಸರಣಿಯಲ್ಲಿ ಭಾರತ, ರೋಹಿತ್ ಶರ್ಮಾ ನೇತೃತ್ವದಲ್ಲಿ 4–1ಅಂತರದ ಗೆಲುವು ದಾಖಲಿಸಿತ್ತು. ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್ ಟಿ–20 ಕ್ರಿಕೆಟ್ ಟೂರ್ನಿಗೆ ಇತ್ತೀಚೆಗೆ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.